ಹೊಸದಿಲ್ಲಿ : ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಹಗಲು ಗನಸು ಎಂದು ಸಿಎಂ ಸಿದ್ದರಾಮಯ್ಯ ವ್ಯಂಗವಾಡಿದರು.
ಗುರುವಾರ ನವದೆಹಲಿಯಲ್ಲಿ ಮೇಕೆದಾಟು ಅಣೆಕಟ್ಟು ನಾವು ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನಾವು ಅಧಿಕಾರಕ್ಕೆ ಬಂದ ಕೂಡಲೆ ಮೇಕೆದಾಟು ಅಣೆಕಟ್ಟನ್ನು ನಿರ್ಮಿಸಲಾಗುವುದು ಎಂದು ಲೋಕಸಭಾ ಚುನಾವಣೆಯ ವೇಳೆ ಹೇಳುತ್ತಿದ್ದರು. ಈಗ ಯಾಕೆ ಈ ರೀತಿ ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಅವರು ಅಧಿಕಾರಕ್ಕೆ ಬರುವುದಿಲ್ಲ. ಹಾಗೆಂದು ಮೇಕೆದಾಟು ಅಣೆಕಟ್ಟು ರಾಜ್ಯಕ್ಕೆ ಬೇಡವೆ ಎಂದು ಪ್ರಶ್ನಿಸಿದರು. ನಾನು ಜನತಾದಳದ (ಎಸ್) ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ 2004 ಅತಿ ಹೆಚ್ಚು ಅಂದರೆ 59 ಸ್ಥಾನಗಳನ್ನು ಪಡೆದಿದ್ದೆವು. ಅವರ ಶಕ್ತಿ ಚುನಾವಣೆಯಿಂದ ಚುನಾವಣೆಗೆ ಕುಂಠಿತವಾಗಿದೆಯೇ ಹೊರೆತು ಹೆಚ್ಚಾಗಿಲ್ಲ. ಈಗ ಎಷ್ಟು ಸ್ಥಾನಗಳಿವೆ ಅವರಿಗೆ ಎಂದು ಪ್ರಶ್ನಿಸಿದ ಸಿಎಂ, ಅವರದ್ದು ಹಗಲು ಗನಸು ಎಂದರು.
ಕ್ಯಾಂಪಸ್ ಆಯ್ಕೆ ಪರಿಚಯಿಸಲು ಸರ್ಕಾರದ ಚಿಂತನೆ: ಕ್ಯಾಂಪಸ್ ಆಯ್ಕೆಯನ್ನು ವಿವಿ. ಕಾಲೇಜುಗಳಲ್ಲಿ ಪುನಃ ಪರಿಚಯಿಸುವ ಬಗ್ಗೆ ಚಿಂತನೆ ಸರ್ಕಾರಕ್ಕಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅತಿ ಹೆಚ್ಚಿನ ಶಾಸಕರ ಬೆಂಬಲ ಸಿದ್ದರಾಮಯ್ಯ ಅವರಿಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಅವರು ಅವರ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ಬಗ್ಗೆ ಅವರನ್ನೇ ಪ್ರಶ್ನಿಸಿ ಎಂದರು.
ಸಿಎಂ ಪತ್ನಿಗೆ ನೋಟೀಸು : ವಿಷಯ ತಿಳಿದಿಲ್ಲ: ಮುಡಾ ಪ್ರಕರಣದಲ್ಲಿ ಉಚ್ಛ ನ್ಯಾಯಾಲಯ ಮುಖ್ಯಮಂತ್ರಿಗಳ ಪತ್ನಿಗೆ ನೋಟೀಸು ಜಾರಿ ಮಾಡಲು ಆದೇಶ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಈ ಬಗ್ಗೆ ನನಗೆ ತಿಳಿದಿಲ್ಲ, ಎಂದರು.
ಹಿಂದುಳಿದ ವರ್ಗಗಳ ಬಗ್ಗೆ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ಹೆಚ್ಚಿನ ಹೋರಾಟ ಮಾಡುತ್ತಿದ್ದು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಪೈಕಿ ಸಿದ್ದರಾಮಯ್ಯ ಅವರು ಮಾತ್ರ ಒಬಿಸಿ ಸಿಎಂ ಆಗಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಯಾರೋ ಒಬ್ಬರು ಇಬ್ಬರು ಹೇಳಿದರೆ ಅದು ಹೈ ಕಮಾಂಡ್ ಚರ್ಚೆ ಮಾಡಿದಂತೆ ಅಲ್ಲ ಎಂದರು.





