ನವದೆಹಲಿ: ವಕ್ಫ್ ಬೋರ್ಡ್‌ಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆಗಿದೆ ಎಂಬ ಆರೋಪದಡಿ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತ್ತುಲ್ಲಾ ಖಾನ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಬಂಧಿಸಿದೆ.
ಇಡಿ ಅಧಿಕಾರಿಗಳ ತಂಡ ಅಮಾನತ್ತುಲ್ಲಾ ಖಾನ್ ಅವರ ಮನೆ ಮೇಲೆ ದಾಳಿ ಮಾಡಿ ಬಂಧಿಸಿದೆ.
ಇಡಿ ತಮ್ಮನ್ನು ಬಂಧಿಸಲಿದೆ ಎಂದು ಈ ಹಿಂದೆಯೇ ಅವರು ಮಾಹಿತಿ ಹಂಚಿಕೊಂಡಿದ್ದರು. ಈ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಅವರು, ನನ್ನನ್ನು ಬಂಧಿಸಲು ಇಡಿ ಅಧಿಕಾರಿಗಳು ನನ್ನ ಮನೆಗೆ ಬಂದಿದ್ದಾರೆ ಎಂದು ಟ್ವೀಟ್ ಮಾಡಿದ್ದರು.
2018 ಮತ್ತು 2022ರ ನಡುವೆ ವಕ್ಫ್ ಬೋರ್ಡ್‌ಗೆ ಅಕ್ರಮವಾಗಿ ಸಿಬ್ಬಂದಿಗಳನ್ನು ನೇಮಿಸಿದ್ದಾರೆ. ಅಲ್ಲಿನ ಆಸ್ತಿಗಳನ್ನು ಅಕ್ರಮವಾಗಿ ಗುತ್ತಿಗೆ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಅಮಾನತ್ತುಲ್ಲಾ ಅವರನ್ನು ಬಂಧಿಸಿದೆ.
ಅಮಾನತ್ತುಲ್ಲಾ ಮನೆ ಮೇಲೆ ಇಡಿ ದಾಳಿ ಮಾಡಿರುವ ಕುರಿತು ಆಪ್ ತೀವ್ರ ಆಕ್ರೋಶ ಹೊರಹಾಕಿದೆ. ಆಪ್ ಸಂಸದ ಸಂಜಯ್ ಸಿಂಗ್ ಅವರು ಮಾತನಾಡಿದ್ದು, ಬಿಜೆಪಿಯ ದ್ವೇಷದ ರಾಜಕೀಯ ಭಾಗವಾಗಿ ಖಾನ್ ಅವರನ್ನು ಇಡಿ ಬಂಧಿಸಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.