ಡೆಹ್ರಾಡೂನ್ : ಉತ್ತರಾಖಂಡದಾದ್ಯಂತ ವಿಶೇಷವಾಗಿ ರಾಜಧಾನಿ ಡೆಹ್ರಾಡೂನ್‌ನಲ್ಲಿ ಮಳೆಯ ಪ್ರವಾಹದಿಂದ ವಿನಾಶವುಂಟಾಗಿದೆ. ಉಕ್ಕಿ ಹರಿಯುವ ನದಿತೊರೆಗಳು, ಮನೆಗಳು, ರಸ್ತೆಗಳು ಮತ್ತು ಸೇತುವೆಗಳು ಕೊಚ್ಚಿ ಹೋಗಿವೆ. ನಿರಂತರ ಮಳೆಗೆ ಇದುವರೆಗೆ ೧೮ ಮಂದಿ ಮೃತಪಟ್ಟು, ೨೦ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ರಕ್ಷಣಾ ತಂಡಗಳು ಸುಮಾರು ೯೦೦ ಜನರನ್ನು ರಕ್ಷಿಸಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಯುಎಸ್‌ಡಿಎಂಎ) ವರದಿಯ ಪ್ರಕಾರ, ಡೆಹ್ರಾಡೂನ್ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ೧೮ ಜನರು ಪ್ರಾಣ ಕಳೆದುಕೊಂಡಿದ್ದಾರೆ. ನೈನಿತಾಲ್ ಮತ್ತು ಪಿಥೋರಗಢ ಜಿಲ್ಲೆಗಳಲ್ಲಿ ತಲಾ ಒಂದು ಸಾವು ದಾಖಲಾಗಿದೆ.
ಡೆಹ್ರಾಡೂನ್‌ನ ವಿಕಾಸನಗರದಲ್ಲಿ ಟನ್ಸ್ ನದಿಯ ಉಕ್ಕಿ ಹರಿಯುತ್ತಿದ್ದು, ನದಿ ದಾಟುತ್ತಿದ್ದ ಟ್ರ್ಯಾಕ್ಟರ್-ಟ್ರಾಲಿಯೊಂದು ಪ್ರವಾಹದ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ದುರಂತದಲ್ಲಿ ಮೊರಾದಾಬಾದ್ ಜಿಲ್ಲೆಯ ಮುಧಿಯಾ ಜೈನ್ ಗ್ರಾಮದ ಆರು ಜನರು ಸಾವನ್ನಪ್ಪಿದ್ದಾರೆ.
ಸಹಸ್ರಧಾರ ಮತ್ತು ಮಾಲ್ದೇವ್ತಾ ಪ್ರದೇಶಗಳು ಹೆಚ್ಚು ಹಾನಿಗೀಡಾಗಿವೆ. ರಿಸ್ಪಾನಾ ಮತ್ತು ಬಿಂದಾಲ್ ನಂತಹ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವಾರು ಪ್ರದೇಶಗಳು ಪ್ರವಾಹಕ್ಕೆ ಮುಳುಗಿವೆ. ಮನೆಗಳು, ಅಂಗಡಿ ಮತ್ತು ಹೊಟೇಲ್‌ಗಳು ಸಹ ಉಕ್ಕಿ ಹರಿಯುತ್ತಿರುವ ನೀರಿನಿಂದ ಕೊಚ್ಚಿ ಹೋಗಿವೆ.
ಸಹಸ್ರಧಾರಾದ ಕಾರ್ಲಿಗಾಡ್ ಪ್ರದೇಶದಲ್ಲಿ, ನೀರಿನಲ್ಲಿ ಮಣ್ಣು ಕೊಚ್ಚಿ ಹೋಗಿ ೮ ಅಂಗಡಿಗಳು ಮತ್ತು ಹೋಟೆಲ್ ಕೊಚ್ಚಿಹಾಕಿ, ಇಬ್ಬರು ಕಾಣೆಯಾಗಿದ್ದಾರೆ. ಡಿಐಟಿ ಕಾಲೇಜು ಬಳಿಯ ಗ್ರೀನ್ ವ್ಯಾಲಿ ಪಿಜಿಯಲ್ಲಿ ಗೋಡೆ ಕುಸಿದು ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದು, ಅವರ ಶವವನ್ನು ಎಸ್‌ಡಿಆರ್‌ಎಫ್ ಹೊರತೆಗೆದಿದೆ.
ಮಸ್ಸೂರಿಯ ಝರಿಪಾನಿ ಟೋಲ್ ಪ್ಲಾಜಾದಲ್ಲಿ ಭೂಕುಸಿತದಲ್ಲಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ. ಕಲ್ಸಿ-ಚಕ್ರತ ಮೋಟಾರ್ ರಸ್ತೆಯಲ್ಲಿ ಕಲ್ಲು ಬಿದ್ದು ಮತ್ತೊಬ್ಬ ಸ್ಕೂಟರ್ ಸವಾರ ಮೃತಪಟ್ಟಿದ್ದಾರೆ.





