Mysore
24
overcast clouds

Social Media

ಶನಿವಾರ, 20 ಜೂನ್ 2026
Light
Dark

ನಿರ್ಮಾಣ ಹಂತದಲ್ಲಿದ್ದ ಹನುಮನ ದೇಗುಲದ ಛಾವಣಿ ಕುಸಿತ ; 7 ಭಕ್ತರು ಸಾವು

ಮುಂಬೈ : ಇಲ್ಲಿನ ಪರ್ಭಾನಿಯಲ್ಲಿರುವ ನಿರ್ಮಾಣ ಹಂತದ ಹನುಮನ ದೇವಾಲಯದ ಛಾವಣಿ ಕುಸಿದು 7 ಭಕ್ತರು ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಭಕ್ತರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪರ್ಭಾನಿ ಜಿಲ್ಲೆಯ ಮನವತ್ ತಾಲೂಕಿನ ಯಶ್ವಾಡಿಯಲ್ಲಿರುವ ನಿರ್ಮಾಣ ಹಂತದ ಹನುಮನ ದೇವಾಲಯದಲ್ಲಿ ಶನಿವಾರ (ಜೂ.20) ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಏಕಾಏಕಿ ದೇವಾಲಯದ ಮೇಲ್ಛಾವಣಿ ಕುಸಿದು ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೇಲ್ಛಾವಣಿ ಕುಸಿದು ಬೀಳುವ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭೀಕರವಾಗಿದೆ. ಕಟ್ಟಡ ಕೆಲಸ ನಡೆಯುತ್ತಿದ್ದರೂ ಕೂಡ ಅಲ್ಲಿಯೇ ದೇವರನ್ನು ಪೂಜಿಸಲಾಗುತ್ತಿತ್ತು ಎಂದು ವಿಡಿಯೋ ಮೂಲಕ ತಿಳಿದುಬಂದಿದೆ. ಭಕ್ತಾಧಿಗಳು ಸಾಲಾಗಿ ಬಂದು ದೇವರಿಗೆ ನಮಸ್ಕರಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಮೇಲ್ಛಾವಣಿ ಕುಸಿಯುವಾಗ ಸುಮಾರು 30 ಭಕ್ತರು ಇರುವುದು ಕಂಡುಬಂದಿದ್ದು, ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು ಕೆಲ ಗಾಯಾಳುಗಳನ್ನು ಹೊರಕ್ಕೆ ತೆಗೆದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕೆಲವರ ಸ್ಥಿತಿ ಗಂಭೀರವಾಗಿದೆ.

ಈ ಬಗ್ಗೆ ಪರ್ಭಾನಿ ಜಿಲ್ಲಾ ಉಸ್ತುವಾರಿ ಸಚಿವೆ ಮೇಘನಾ ಬೋರ್ಡಿಕರ್‌ ಅವರು ಮಾತನಾಡಿ, ಗಾಯಾಳುಗಳು ಮತ್ತು ಮೃತರ ಕುಟುಂಬಸ್ಥರಿಗೆ ಅಗತ್ಯವಿರುವ ಎಲ್ಲಾ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ

Tags:
error: Content is protected !!