ಬೆಂಗಳೂರು: ಪರಿಸರವಾದಿಗಳ ವಿರೋಧದ ಬೆನ್ನಲ್ಲೇ ಲಾಲ್ಬಾಗ್ ಮೂಲಕ ಸುರಂಗ ರಸ್ತೆ ನಿರ್ಮಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಈ ಕುರಿತು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದ್ದು, ಎರಡು ಪರ್ಯಾಯ ಮಾರ್ಗಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ವರೆಗೆ ಯೋಜಿಸಿರುವ ಸುರಂಗ ಮಾರ್ಗವು ಲಾಲ್ಬಾಗ್ನ ಪ್ರಾಚೀನ ಬಂಡೆಯ ಕೆಳಗೆ ಹಾದುಹೋಗುವ ಪ್ರಸ್ತಾವನೆ ಇತ್ತು. ಸಸ್ಯೋದ್ಯಾನದಲ್ಲಿ ನಿರ್ಗಮನ ಮಾರ್ಗ ನಿರ್ಮಿಸುವ ಉದ್ದೇಶವೂ ಇತ್ತು.
ಇದರಿಂದ ಪ್ರಾಚೀನ ಬಂಡೆ, ಕೆಂಪೇಗೌಡ ಕಾವಲು ಗೋಪುರ ಹಾಗೂ ಅಂತರ್ಜಲ ವ್ಯವಸ್ಥೆಗೆ ಹಾನಿಯಾಗಬಹುದು ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದರು.
ಇದೀಗ ಸಿದ್ದಾಪುರ ಅಥವಾ ವಿಲ್ಸನ್ ಗಾರ್ಡನ್ ಪ್ರದೇಶದಲ್ಲಿ ಸುರಂಗದ ನಿರ್ಗಮನ ಮಾರ್ಗ ನಿರ್ಮಿಸಲು ಚಿಂತನೆ ನಡೆದಿದೆ. ಎರಡು ಸ್ಥಳಗಳನ್ನು ವೀಕ್ಷಿಸಲಾಗಿದ್ದು, ಒಂದು ಮಾರ್ಗವನ್ನು ಅಂತಿಮಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಮಾರ್ಗ ಬದಲಾವಣೆಯಿಂದ ಯೋಜನಾ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದ್ದು, ವೆಚ್ಚ ಕಡಿತದ ಕುರಿತು ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಗುತ್ತಿಗೆದಾರರೊಂದಿಗೆ ಚರ್ಚಿಸುತ್ತಿದೆ.




