Mysore
23
broken clouds
Light
Dark

ಸರ್ಕಾರಿ ಉದ್ಯೋಗಿಗಳು ಬೆಳಿಗ್ಗೆ 9.15ಕ್ಕೆ ಕಚೇರಿ ತಲುಪಬೇಕು; ಕೇಂದ್ರ ಸರ್ಕಾರ ಖಡಕ್‌ ಸೂಚನೆ

ನವದೆಹಲಿ: ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಮಹತ್ವದ ಆದೇಶವನ್ನು ನೀಡಿದ್ದು, ಇನ್ನು ಮುಂದೆ ಬೆಳಿಗ್ಗೆ 9.15ಕ್ಕೆ ಕಚೇರಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಆದೇಶ ನೀಡಿದೆ. ಒಂದು ವೇಳೆ ತಡವಾದರೆ ಅರ್ಧ ದಿನದ ಕ್ಯಾಶುಯಲ್‌ ರಜೆಯನ್ನು ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಈ ಮೂಲಕ ಕೇಂದ್ರ ಸರ್ಕಾರ ದೇಶಾದ್ಯಂತ ತನ್ನ ಉದ್ಯೋಗಿಗಳಿಗೆ ಖಡಕ್‌ ಆದೇಶವೊಂದನ್ನು ನೀಡಿದೆ. ಕಚೇರಿಗೆ ತಡವಾಗಿ ಬರುವ ಸಿಬ್ಬಂದಿಗಳಿಗೆ ಕೇಂದ್ರ ಸರ್ಕಾರ ಚಾಟಿ ಬೀಸಿದ್ದು, ಇನ್ನು ಮುಂದೆ ಉನ್ನತ ಅಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಬೆಳಿಗ್ಗೆ 9.15ರೊಳಗೆ ಕೆಲಸಕ್ಕೆ ಬರುವಂತೆ ಸೂಚಿಸಿದೆ.

ಇದರಲ್ಲಿ 15 ನಿಮಿಷಗಳ ಗ್ರೇಸ್‌ ಅವಧಿಯೂ ಸೇರಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸುತ್ತೋಲೆ ಹೊರಡಿಸಿದೆ. ಕಚೇರಿಗೆ 9.15ಕ್ಕೆ ತಲುಪಿ ಆಧಾರ್‌ ಸಕ್ರಿಯಗೊಳಿಸಿದ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಬಳಸಿಕೊಂಡು ತಮ್ಮ ಹಾಜರಾತಿಯನ್ನು ಹಾಕಬೇಕು ಎಂದು ಸೂಚಿಸಿದೆ.

ಸಿಬ್ಬಂದಿಗಳು ಒಂದು ವೇಳೆ ಬೆಳಿಗ್ಗೆ 9.15ರೊಳಗೆ ಬಾರದಿದ್ದಲ್ಲಿ ಅರ್ಧ ದಿನದ ಕ್ಯಾಶುಯೆಲ್‌ ರಜೆಯನ್ನು ಕಡಿತಗೊಳಿಸಲಾಗುವುದು. ಕೇಂದ್ರ ಸರ್ಕಾರದ ಕಚೇರಿಗಳು ಬೆಳಿಗ್ಗೆ 9ರಿಂದ ಸಂಜೆ 5.30ರವರೆಗೆ ಕಡ್ಡಾಯವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

ಇನ್ನೂ ವರದಿಯ ಪ್ರಕಾರ ಸಿಬ್ಬಂದಿಗಳಿಗೆ ಒಂದು ದಿನ ಕಚೇರಿಗೆ ಹಾಜರಾಗಲು ಸಾಧ್ಯವಾಗದಿದ್ದರೆ ಮುಂಚಿತವಾಗಿ ತಿಳಿಸಲು ನೌಕರರಿಗೆ ಸುತ್ತೋಲೆಯಲ್ಲಿ ಹೇಳಲಾಗಿದೆ. ಇದಕ್ಕಾಗಿ ಕ್ಯಾಶುಯೆಲ್‌ ರಜೆಯನ್ನು ಬಳಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದೆ.