ಬೆಂಗಳೂರು : ಪ್ರಧಾನಿ ನರೇಂದ್ರಮೋದಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ವೇಳೆ ಜಿಲಿಟಿನ್ ಕಡ್ಡಿಗಳು ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮೋದಿಯವರು ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್‌ನ ಧ್ಯಾನ ಮಂದಿರ ಉದ್ಘಾಟನೆಗೆ ತೆರಳಿದ್ದ ವೇಳೆ ತಾತಗುಣಿ ಬಳಿ ಇರುವ ಅಗಳನ ಕೆರೆ ಬಳಿ ಶಂಕಿತ ವ್ಯಕ್ತಿಯೊಬ್ಬ ಜಿಲಿಟಿನ್ ಕಡ್ಡಿ ಇಟ್ಟಿದ್ದು ಪತ್ತೆಯಾಯಿತು.
ತಕ್ಷಣವೇ ಇದರ ಬಗ್ಗೆ ಮಾಹಿತಿ ಪಡೆದ ಬೆಂಗಳೂರು ನಗರ ಹಾಗೂ ರಾಮನಗರ ಪೊಲೀಸರು ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು. ಆರ್ಟ್ ಆಫ್ ಲಿವಿಂಗ್‌ನ ಧ್ಯಾನಮಂದಿರ ಉದ್ಘಾಟನೆ ಹಾಗೂ ರವಿಶಂಕರ್ ಗುರೂಜೀಯವರ ೭೦ನೇ ಹುಟ್ಟುಹಬ್ಬದ ಕಾರ್ಯಕ್ರಮಕ್ಕಾಗಿ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್‌ಗೆ ಆಗಮಿಸಿದ್ದರು.
ಮೋದಿಯವರು ಈ ಮೊದಲು ನಿಗದಿಪಡಿಸಿದಂತೆ 1 ಗಂಟೆ 5 ನಿಮಿಷಕ್ಕೆ ಆರ್ಟ್ ಆಫ್ ಲಿವಿಂಗ್‌ನಿಂದ ಹೊರಟು ರಸ್ತೆ ಮೂಲಕ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿತ್ತು. ಆದರೆ ರಸ್ತೆ ಪಕ್ಕ ಜಿಲಿಟಿನ್ ಕಡ್ಡಿಗಳು ಪತ್ತೆಯಾದ ಪರಿಣಾಮ ಅವರ ಪ್ರಯಾಣದಲ್ಲಿ ತುಸು ವಿಳಂಬವಾಯಿತು. ಪತ್ತೆಯಾದ ಸ್ಥಳದಲ್ಲಿ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ, ಎಸ್‌ಪಿಜಿ, ರಾಜ್ಯ ಪೊಲೀಸ್ ತಂಡ ಜಂಟಿಯಾಗಿ ಕಾರ್ಯಚರಣೆ ನಡೆಸಿ ಜಿಲಿಟಿನ್ ಕಡ್ಡಿಗಳನ್ನು ವಶಕ್ಕೆ ಪಡೆದರು.
ಪೊಲೀಸರ ವಶದಲ್ಲಿರುವ ಶಂಕಿತ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿ ವಿವಿಧ ಆಯಾಮಗಳಲ್ಲಿ ಮಾಹಿತಿ ಪಡೆಯುತ್ತಿದ್ದಾರೆ. ಜಿಲಿಟಿನ್ ಕಡ್ಡಿಗಳು ಅಸಲಿಯೋ, ನಕಲಿಯೋ ಇದರ ಹಿಂದೆ ಯಾವುದಾದರೂ ಉದ್ದೇಶವಿತ್ತೆ? ಈತ ಮಾನಸಿಕವಾಗಿ ಅಸ್ವಸ್ಥನೇ? ಯಾವುದಾದರೂ ಸಂಘಟನೆಗಳ ಪ್ರಭಾವಕ್ಕೆ ಒಳಗಾಗಿ ದೃಷ್ಕೃತ್ಯ ನಡೆಸಲು ಹೊಂಚು ಹಾಕಿದ್ದನೇ ಎಂಬುದು ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆಗೆ ಗುರಿಪಡಿಸಿದ್ದಾರೆ.
ರಸ್ತೆ ಪಕ್ಕದಲ್ಲಿ ಜಿಲಿಟಿನ್ ಕಡ್ಡಿಗಳು ಪತ್ತೆಯಾದ ಪರಿಣಾಮ ಪೊಲೀಸರು ಕೆಲಕಾಲ ಆತಂಕಕ್ಕೆ ಒಳಗಾಗಿ ಆರ್ಟ್ ಆಫ್ ಲಿವಿಂಗ್‌ನಿಂದ ಎಚ್‌ಎಎಲ್ ವಿಮಾನ ನಿಲ್ದಾಣದವರೆಗೆ ಹೈ ಅಲರ್ಟ್ ಘೋಷಿಸಿದ್ದರು.
ಈ ವೇಳೆ ನೋ ಫ್ಲೈಯಿಂಗ್ ಜೋನ್, ದ್ರೋಣ್ ಹಾರಾಟ, ಹೆಲಿಕಾಪ್ಟರ್ ಹಾರಾಟಕ್ಕೂ ನಿರ್ಬಂಧ ವಿಧಿಸಲಾಗಿತ್ತು.




