ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಮರ್ಥನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಕೇಂದ್ರ ಸರ್ಕಾರದ ಮೊದಲ ಬಜೆಟ್ ಇಂದು ಮಂಡನೆಯಾಗಿದ್ದು, ಹಲವು ವರ್ಗಗಳಿಗೆ ಬಂಪರ್ ಆಫರ್ ನೀಡಲಾಗಿದೆ.
ಕೇಂದ್ರ ಬಜೆಟ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದು, ಬಜೆಟ್‌ನಿಂದ ಶಿಕ್ಷಣ, ಕೌಶಲ್ಯಕ್ಕೆ ಹೊಸ ಮಾರ್ಗ ಸಿಗಲಿದ್ದು, ಯುವಕರಿಗೆ ಉತ್ತಮ ಅವಕಾಶ ನೀಡಲಿದೆ. ಈ ಬಜೆಟ್ ಮಧ್ಯಮ ವರ್ಗದವರಿಗೆ ಹೊಸ ಶಕ್ತಿ ನೀಡುವ ಬಜೆಟ್ ಆಗಿದ್ದು, ಇದು ಮುಂದಿನ ದಿನಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಹಾಡಿ ಹೊಗಳಿದರು.
ಇನ್ನೂ ಈ ಬಾರಿಯ ಬಜೆಟ್‌ನಿಂದ ಆರ್ಥಿಕತೆಗೆ ಹೊಸ ಗತಿ ಸಿಗಲಿದ್ದು, ಯುವಕರ ಶಿಕ್ಷಣಕ್ಕೆ ಉತ್ತಮ ಅವಕಾಶ ಸಿಗಲಿದೆ. ಬಜೆಟ್‌ನಲ್ಲಿ ಎಲ್ಲಾ ಕ್ಷೇತ್ರಗಳಿಗೂ ಒತ್ತು ನೀಡಲಾಗಿದ್ದು, ಮುದ್ರಾ ಯೋಜನೆ ಸಾಲದ ಮಿತಿ ಹೆಚ್ಚಳದ ಜೊತೆ ಜೊತೆಗೆ ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗಿದೆ ಎಂದು ಹೇಳಿದರು.
ಈ ಬಜೆಟ್‌ನಿಂದ ಮಹಿಳೆಯರಿಗೆ ಸ್ವಯಂ ಉದ್ಯೋಗದ ಬಲ ಸಿಕ್ಕಿದಂತಾಗಿದ್ದು, ಮಹಿಳೆಯರನ್ನು ಆರ್ಥಿಕ ಭಾಗೀದಾರರನ್ನಾಗಿಸುವ ಯೋಜನೆಯಿದೆ. ಪ್ರತೀ ಮನೆ, ಪ್ರತೀ ಹಳ್ಳಿ, ನಗರದಲ್ಲಿಯೂ ಉದ್ಯಮಿಗಳು ಸೃಷ್ಟಿಯಾಗಬೇಕು ಎಂದು ಕರೆ ನೀಡಿದರು.
ಇನ್ನೂ ಬಜೆಟ್ ಬಗ್ಗೆ ಮುಂದುವರಿದು ಮಾತನಾಡಿದ ಅವರು, ತರಕಾರಿ ಉತ್ಪಾದನಾ ಸೆಕ್ಟರ್‌ಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಬಜೆಟ್‌ನಲ್ಲಿ ಹೆದ್ದಾರಿ, ವಿದ್ಯುತ್, ಜಲಮಾರ್ಗ ಅಭಿವೃದ್ದಿಯ ಬಗ್ಗೆ ನಿರ್ಧಾರ ಮಾಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಇನ್ನೂ ಭಾರತವನ್ನು ಇಡೀ ಜಗತ್ತೇ ತಿರುಗಿ ನೋಡುತ್ತಿದೆ. ಇಂದಿನ ಬಜೆಟ್ ಹೊಸ ಅವಕಾಶಗಳನ್ನು ಹೊತ್ತು ತಂದಿದೆ ಎಂದು ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಬಗ್ಗೆ ಹಾಡಿ ಹೊಗಳಿದರು.