ನವದೆಹಲಿ: ಕಳೆದ ಹಲವಾರು ತಿಂಗಳಿನಿಂದ ಮುಂದೂಡಲ್ಪಟ್ಟಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷರ ಹೆಸರು ಘೋಷಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಜುಲೈ.7ರೊಳಗೆ ಅಂತಿಮ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.
ಬಿಜೆಪಿ ರಾಷ್ಟ್ರಾಧ್ಯಕ್ಷರ ಆಯ್ಕೆಗೆ ಎಂಟು ಕೇಂದ್ರ ಸಚಿವರು ಮತ್ತು ಇತರ ಮೂವರ ನಾಯಕರು ಹೆಸರು ಕೇಳಿ ಬರುತ್ತಿದ್ದರೂ, ಅದರಲ್ಲಿ ಎಂಟು ಮುಖಂಡರು ಮಾತ್ರ ರೇಸಿನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೆಸರೂ, ಸದ್ಯ ಕೇಳಿಬರುತ್ತಿರುವ ಸಂಭಾವ್ಯರ ಹೆಸರಿನಲ್ಲಿದೆ. ಬಿಜೆಪಿಯ ದೆಹಲಿ ನಾಯಕರು ಮತ್ತು ಸಂಘ ಪರಿವಾರದ ಜೊತೆಗೆ, ಜೋಶಿ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.
ಕಳೆದ ದೆಹಲಿ ವಿಧಾನಸಭಾ ಚುನಾವಣೆಯ ವೇಳೆ ಹಲವು ಹೆಸರು ಕೇಳಿಬರುತ್ತಿತ್ತು. ಆದರೆ, ಬಿಜೆಪಿ ವರಿಷ್ಠರು ಅಚ್ಚರಿಯಾಗಿ ರೇಖಾ ಗುಪ್ತಾ ಅವರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದ್ದರು. ಅದೇ ರೀತಿ ರಾಷ್ಟ್ರಾಧ್ಯಕ್ಷ ಹುದ್ದೆಗೂ ಮಹಿಳೆಯ ಹೆಸರನ್ನು ಫೈನಲ್ ಮಾಡಿದರೂ ಮಾಡಬಹುದು. ಹಾಗಾಗಿ, ಇಬ್ಬರು ಮಹಿಳೆಯರ ಹೆಸರು ಸಹ ಕೇಳಿ ಬರುತ್ತಿದೆ.
ಒಟ್ಟಾರೆಯಾಗಿ ಹನ್ನೊಂದು ಸಂಭಾವ್ಯರ ಹೆಸರು ಪಟ್ಟಿಯಲ್ಲಿದ್ದು, ಅದರಲ್ಲಿ ಮೊದಲ ಎಂಟು ನಾಯಕರು ಪ್ರಮುಖವಾಗಿ ರೇಸಿನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.