ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದುರ್ಬಲ ವರ್ಗಗಳಾದ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಯುವಕರ ವಿದ್ಯಾರ್ಥಿವೇತನವನ್ನು ಕಸಿದುಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ʼಎಕ್ಸ್ʼ ನಲ್ಲಿ ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಸರ್ಕಾರ ದೇಶದಲ್ಲಿರುವ ದುರ್ಬಲ ವರ್ಗದ ಯುವಕರ ವಿದ್ಯಾರ್ಥಿವೇತನವನ್ನು ಕಸಿದುಕೊಂಡಿದೆ. ಅವರ ಆಕಾಂಕ್ಷೆಗಳನ್ನು ಅಣಕಿಸುತ್ತಿದೆ ಎಂದು ಹೇಳಿದ್ದಾರೆ.
ದೇಶದ ದುರ್ಬಲ ವರ್ಗದ ವಿದ್ಯಾರ್ಥಿಗಳು ಅವಕಾಶಗಳನ್ನು ಪಡೆಯದ ಹೊರತು, ಅವರ ಕೌಶಲ್ಯಗಳನ್ನು ಪ್ರೋತ್ಸಾಹಿಸದ ಹೊರತು, ನಾವು ಅವರಿಗೆ ಹೇಗೆ ಉದ್ಯೋಗಗಳನ್ನು ಕೊಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಎಲ್ಲಾ ವಿದ್ಯಾರ್ಥಿವೇತನದ ವಿದ್ಯಾಥಿಗಳ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಇಳಿಸಿರುವುದು ಅಲ್ಲದೇ, ವರ್ಷದಿಂದ ವರ್ಷಕ್ಕೆ ಶೇ 25ರಷ್ಟು ಕಡಿಮೆ ಹಣವನ್ನು ಖರ್ಚು ಮಾಡಿದೆ ಎಂದು ಅಂಕಿ ಅಂಶ ತೋರಿಸುತ್ತಿದೆ ಎಂದು ಖರ್ಗೆ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.