ಪಾಟ್ನಾ : ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದ್ದು ಆಡಳಿತ ವಿರೋಧಿ ಅಲೆಯ ನಡುವೆಯೂ ಮತ್ತೊಮ್ಮೆ ಎನ್‌ಡಿಎ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ಹೇಳಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೆ ದಾರಿ ಮಾಡಿಕೊಟ್ಟಿದೆ. ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಬಣವು ಎನ್‌ಡಿಎಗಿಂತ ಹಿಂದುಳಿದಿದೆ ಎಂದು ಸಮೀಕ್ಷೆಗಳು ತಿಳಿಸಿವೆ.
ಎರಡನೇ ಹಂತದ ಮತದಾನ ಬೆನ್ನಲ್ಲೇ ವಿವಿಧ ಖಾಸಗಿ ಸಂಸ್ಥೆಗಳು ನಡೆಸಿರುವ ಮತಗಟ್ಟೆ ಸಮೀಕ್ಷೆಯಲ್ಲಿ ಬಹುತೇಕ ಸಮೀಕ್ಷೆಗಳು ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ.
ಇಟಿಜಿ ಖಾಸಗಿ ಸಂಸ್ಥೆ ಮಾತ್ರ ಮಹಾಘಟ್ ಬಂಧನ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ.
ಒಟ್ಟು ಹತ್ತಕ್ಕೂ ಹೆಚ್ಚು ಸಂಸ್ಥೆಗಳು ನಡೆಸಿರುವ ಮತಗಟ್ಟೆ ಸಮೀಕ್ಷೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರ್ ಮುಖ್ಯಮಂತ್ರಿ, ನಿತೀಶ್ ಕುಮಾರ್ ಜನಪ್ರಿಯತೆ ಹಾಗೂ ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಜನಪ್ರಿಯ ಕಾರ್ಯಕ್ರಮಗಳು ಕೈಹಿಡಿದಿವೆ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ. ವಿಶೇಷವಾಗಿ ಮಹಿಳಾ ಮತದಾರರು ಈ ಬಾರಿ
ಎನ್ ಡಿಎ ಗೆ ಹೆಚ್ಚಿನ ಪ್ರಮಾಣದಲ್ಲಿ ಮತದ ಮತದಾನ ಮಾಡಿದ್ದಾರೆ. ಚುನಾವಣೆಗೆ ಮುನ್ನ ಮಹಿಳೆಯರ ಖಾತೆಗಳಿಗೆ 10,ಸಾವಿರ ಖಾತೆಗಳಿಗೆ ಹಾಕಿದ್ದು ಮತದಾನದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ.
ಈ ಬಾರಿ ಬಿಹಾರ ವಿಧಾನಸಭೆಯಲ್ಲಿ ಎಲ್ಲರ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಬಹುದೆಂದು ಹೇಳಲಾಗಿದ್ದ ಚುನಾವಣೆ ಚಾಣಕ್ಯ ಪ್ರಶಾಂತ್ ಕಿಶೋರ್ ನೇತ್ರತ್ವದ ಜಿಎಸ್‌ಪಿ ಎರಡಂಕಿ ದಾಟುವುದಿಲ್ಲ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ.
ಇನ್ನು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ದೇಶದಾದ್ಯಂತ ಎಬ್ಬಿಸಿರುವ ಓಟ್ ಚೋರಿ ಮದಾರರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಚುನಾವಣೆಗೂ ಮುನ್ನ ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್ ಜೊತೆ ನಡೆಸಿದ ಜನ್ ಅಧಿಕಾರ ಯಾತ್ರೆಯೂ ಮಹಾಘಟ್ ಬಂಧನ್ ಗೆ ಕೈ ಹಿಡಿದಿಲ್ಲ.
ಟೈಮ್ಸ್ ನೌ ಜೆವಿಸಿ ಎಕ್ಸಿಟ್ ಪೋಲ್ ಪ್ರಕಾರ, ಬಿಹಾರ ರಾಜ್ಯದ 243 ಸ್ಥಾನಗಳಲ್ಲಿ ಎನ್‌ಡಿಎ 135 ರಿಂದ 150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಮಹಾಘಟಬಂಧನ್‌ಗೆ 88 ರಿಂದ 103 ಕ್ಷೇತ್ರಗಳಲ್ಲಿ ಗೆಲುವು ಸಿಗಲಿದೆ. ಇತರೆ 3 ರಿಂದ 7 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಿದೆ.
ಇದನ್ನೂ ಓದಿ:-ದಿಲ್ಲಿ ಬೆನ್ನಲ್ಲೇ ಪಾಕ್‌ನಲ್ಲೂ ಬಾಂಬ್ ಸ್ಛೋಟ ; 12 ಮಂದಿ ಸಾವು
ಟೈಮ್ಸ್ ನೌ ಜೆವಿಸಿ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ, ಜೆಡಿಯು, ಎಚ್‌ಎಎಂ, ಆರ್‌ಎಲ್‌ಎಂ ಮತ್ತು ಎಲ್‌ಜೆಪಿಆರ್‌ವಿ ಒಳಗೊಂಡ ಎನ್‌ಡಿಎ ಮೈತ್ರಿಕೂಟಕ್ಕೆ ಪೂರ್ಣ ಬಹುಮತ ಸಿಗಲಿದ್ದು, ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂಬ ಭವಿಷ್ಯ ನುಡಿದಿದೆ.
ಬಿಹಾರದಲ್ಲಿ ಬಿಜೆಪಿ, ಜೆಡಿಯು, ಎಚ್‌ಎಎಂ, ಆರ್‌ಎಲ್‌ಎಂ ಮತ್ತು ಎಲ್‌ಜೆಪಿಆರ್‌ವಿ ಒಳಗೊಂಡ ಎನ್‌ಡಿಎ ಮೈತ್ರಿಕೂಟ ಮತ್ತು ಆರ್‌ಜೆಡಿ, ಕಾಂಗ್ರೆಸ್, ಎಡ ಪಕ್ಷಗಳ ನಡುವೆ ರಾಜಕೀಯ ಪೈಪೋಟಿ ಜೋರಾಗಿದೆ. ಬಿಹಾರ ವಿಧಾನಸಭಾ ಚುನಾವಣೆ 2025 ಎರಡು ಹಂತಗಳಲ್ಲಿ ನಡೆದಿದೆ. ನವೆಂಬರ್ 6 ರಂದು ನಡೆದ ಮೊದಲ ಹಂತದಲ್ಲಿ 65.08% ಮತದಾನ ದಾಖಲಾಗಿದ್ದರೆ, ನವೆಂರ್ 11 ರಂದು ನಡೆದ ಎರಡನೇ ಹಂತದಲ್ಲಿ 67.14% ಮತದಾನ ದಾಖಲಾಗಿದೆ. ಈ ಮೂಲಕ ಬಿಹಾರದಲ್ಲಿ ದಾಖಲೆಯ ಮತದಾನ ನಡೆದಿದೆ. ಮತ ಎಣಿಕೆ ಕಾರ್ಯ ನವೆಂಬರ್ 14 ರಂದು ನಡೆಯಲಿದೆ.
ಬಿಹಾರದ 243 ವಿಧಾನಸಭಾ ಸ್ಥಾನಗಳಲ್ಲಿ ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆ ವ್ಯವಸ್ಥೆಯು ಜೆಡಿಯು ಮತ್ತು ಬಿಜೆಪಿ ಪಕ್ಷಗಳಿಗೆ ತಲಾ 101 ಸ್ಥಾನಗಳನ್ನು ನಿಗದಿಪಡಿಸಿದರೆ, ಎಲ್‌ಜೆಪಿ 29 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಎಚ್‌ಎಎಂ ಮತ್ತು ಆರ್‌ಎಲ್‌ಎಂ ತಲಾ 6 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಮಹಾ ಮೈತ್ರಿಕೂಟ (ಮಹಾಘಟಬಂಧನ್)ದೊಳಗೆ, ಆರ್‌ಜೆಡಿ 143 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಕಾಂಗ್ರೆಸ್ 61 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಿಪಿಐ 9 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಸಿಪಿಐ (ಎಂ) ನಾಲ್ಕು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಸಿಪಿಐ(ಎಂಎಲ್-ಎಲ್) 20 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ವಿಐಪಿ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಒಟ್ಟು 243 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆದಿದೆ. ಯಾವುದೇ ಪಕ್ಷ ಅಥವಾ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಬಹುಮತವಾಗಿ 122 ಸ್ಥಾನಗಳು ಬೇಕಾಗಿದೆ.





