ನವದೆಹಲಿ: ದೆಹಲಿಯಲ್ಲಿ ಬಿಜೆಪಿ ಗೂಂಡಾಗಿರಿಯಲ್ಲಿ ತೊಡಗಿದ್ದು, ಚುನಾವಣಾ ಆಯೋಗ ಹಾಗೂ ದೆಹಲಿ ಪೊಲೀಸ್ ಇಲಾಖೆ ಪಕ್ಷಪಾತಿ ಧೋರಣೆ ತೋರುತ್ತಿದೆ ಎಂದು ದೆಹಲಿ ಸಿಎಂ ಅತಿಶಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಇಂದು(ಫೆಬ್ರವರಿ.4) ಮಾದರಿ ನೀತಿ ಸಂಹಿತೆ(ಎಂಸಿಸಿ) ಉಲ್ಲಂಘನೆಯ ಆರೋಪದ ಮೇಲೆ ತಮ್ಮ ವಿರುದ್ಧ ಎಫ್‌ಐಆರ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಷ್ಟ್ರ ರಾಜಧಾನಿಯಾಗಿರುವ ದೆಹಲಿಯಲ್ಲಿ ಬಿಜೆಪಿ ಪಕ್ಷದ ನಾಯಕರು ಬಹಿರಂಗವಾಗಿ ಗೂಂಡಾಗಿರಿ ನಡೆಸುತ್ತಿದೆ. ಆದರೆ ಕೇಸರಿ ಪಕ್ಷದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ದೆಹಲಿ ಪೊಲೀಸ್ ರಕ್ಷಣೆ ನೀಡುತ್ತಿದೆ. ಅಲ್ಲದೇ ಚುನಾವಣಾ ಆಯೋಗವು ದೂರು ನೀಡುವವರ ವಿರುದ್ಧವೇ ಪ್ರಕರಣಗಳನ್ನಿ ದಾಖಲಿಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಅವರು ಬಹಿರಂಗವಾಗಿ ಗೂಂಡಾಗಿರಿ ನಡೆಸುತ್ತಿದ್ದಾರೆ. ಅವರ ವಿರುದ್ಧ ಮಾತ್ರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಆದರೆ ದೆಹಲಿಯ ಜನತೆ ಇವೆಲ್ಲವನ್ನು ಗಮನಿಸುತ್ತಿದ್ದಾರೆ. ಹೀಗಾಗಿ ಬಿಜೆಪಿಯವರಿಗೆ ನಾಳೆ(ಫೆ.5) ನಡೆಯುವ ಚುನಾವಣೆಯಲ್ಲಿ ತಕ್ಕ ಉತ್ತರವನ್ನೇ ನೀಡಲಿದ್ದಾರೆ ಎಂದು ಹೇಳಿದರು.