Mysore
25
overcast clouds

Social Media

ಸೋಮವಾರ, 18 ಮೇ 2026
Light
Dark

ನೀರಿನ ಪೈಪ್‌ಲೈನ್ ಅಳವಡಿಕೆ ಚುರುಕು

 

೧೦೦ ಕಿ.ಮೀ.ಹೆಚ್‌ಡಿಪಿಇ ಪೈಪ್ ಅಳವಡಿಕೆ ಪ್ರಗತಿಯಲ್ಲಿ; ಕಾವೇರಿ ನೀರು ಪೂರೈಸಲು ನಗರಸಭೆ ಕ್ರಮ

ಪ್ರಸಾದ್ ಲಕ್ಕೂರು

ಚಾಮರಾಜನಗರ: ನಗರದಲ್ಲಿ ಪದೇಪದೇ ಉದ್ಭವಿಸುವ ಕಾವೇರಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಸ್ಥಳೀಯ ನಗರಸಭೆಯು ಮುಂದಾಗಿದ್ದು, ಹಳೆಯ ಪೈಪ್ ಲೈನ್ ತೆರವುಗೊಳಿಸಿ ಹೊಸದಾಗಿ ಅಳವಡಿಸುವ ಕಾಮಗಾರಿ ಚುರುಕುಗೊಳಿಸಿದೆ.

ತಿ.ನರಸೀಪುರ ತಾಲ್ಲೂಕಿನ ಮಾಲಂಗಿಯಿಂದ ಚಾಮರಾಜನಗರಕ್ಕೆ ಕಾವೇರಿ ಕುಡಿಯುವ ನೀರು ಪೂರೈಸುವ ಎಕ್ಸ್ಪ್ರೆಸ್ ಲೈನ್ ಯೋಜನೆಯಡಿ ಹೆಚ್‌ಡಿಪಿಇ ಪೈಪ್ ಅಳವಡಿಕೆ ಕಾರ್ಯ ನಗರದ ವಿವಿಧೆಡೆ ಸಾಗಿದೆ. ಈಗಾಗಲೇ ನಗರಾದ್ಯಂತ ಅಮೃತ್ ೨.೦ ಯೋಜನೆಯಡಿ ೧೫೦ ಕಿ.ಮೀ. ಹೆಚ್‌ಡಿಪಿಇ ಪೈಪ್ ಅಳವಡಿಕೆ ಕಾರ್ಯ ಮುಗಿದಿದೆ. ಈಗ ಮಾಲಂಗಿ-ಚಾಮರಾಜನಗರ ಕಾವೇರಿ ಕುಡಿಯುವ ನೀರಿನ ಎಕ್ಸ್ಪ್ರೆಸ್ ಲೈನ್ ಯೋಜನೆಯಡಿ ೧೦೦ ಕಿ.ಮೀ. ಪೈಪ್‌ಲೈನ್ ಕಾಮಗಾರಿ ನಡೆಸಲಾಗುತ್ತಿದೆ.

ತುಮಕೂರಿನ ಎಂ.ಕೆ.ರಮೇಶ್ ಎಂಬ ಗುತ್ತಿಗೆದಾರರು ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ. ನಗರದ ಸೋಮವಾರ ಪೇಟೆ ಬಡಾವಣೆ, ದೇವಾಂಗ ಬೀದಿ, ಅಗ್ರಹಾರ ಬೀದಿ,  ಗುಂಡ್ಲುಪೇಟೆ ವೃತ್ತ, ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸುತ್ತಮುತ್ತಲ ಬಡಾವಣೆಗಳಲ್ಲಿ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ೧೫೮ ಕೋಟಿ ರೂ.ಗಳ ಮಾಲಂಗಿ- ಚಾಮರಾಜನಗರ ಕುಡಿಯುವ ನೀರಿನ ಎಕ್ಸ್ಪ್ರೆಸ್ ಲೈನ್ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಮಾಲಂಗಿ ಬಳಿ ಹರಿಯುವ ಕಾವೇರಿ ನದಿ ದಡದಲ್ಲಿ ಪಂಪ್‌ಹೌಸ್ ನಿರ್ಮಾಣ, ಮಾಲಂಗಿಯಿAದ ಚಾ.ನಗರ ತನಕ ೩೫ ಕಿ.ಮೀ. ದೂರ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಶುರುವಾಗಿದೆ.

ಪೈಪ್‌ಲೈನ್ ಹಾದುಬರುವ ಮಂಗಲ ಗ್ರಾಮದ ಬಳಿಯಿರುವ ಹಳೆಯದಾದ ನೀರು ಶುದ್ಧೀಕರಣ ಘಟಕದಲ್ಲಿ ಮತ್ತೊಂದು ಶುದ್ಧೀಕರಣ ವಿಭಾಗ ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಇದಕ್ಕೂ ಮೊದಲು ನಗರದಲ್ಲಿ ದುರಸ್ತಿಯಾಗಿರುವ ಹಳೆಯ ಪಿವಿಸಿ ಪೈಪ್‌ಲೈನ್ ತೆರವು ಮಾಡಿಸಿ ಹೊಸದಾಗಿ ಹೆಚ್‌ಡಿಪಿಇ ಪೈಪ್ ಅಳವಡಿಕೆ ಕಾರ್ಯ ಕೈಗೊಳ್ಳಲಾಗಿದೆ. ನಗರದಲ್ಲಿ ಕಾವೇರಿ ನೀರು ಸಂಗ್ರಹಿಸಲು ನಗರದ ಆಶ್ರಯ ಬಡಾವಣೆಯಲ್ಲಿ ೧೫ ಲಕ್ಷ ಲೀಟರ್ ನೀರು ಸಂಗ್ರಹಿಸುವ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೂ ಸ್ಥಳ ಗುರುತಿಸಲಾಗಿದೆ.

ಈ ಕಾಮಗಾರಿ ಆರಂಭಕ್ಕೂ ಚಾಲನೆ ಸಿಗಬೇಕಿದೆ. ನಗರದಲ್ಲೂ ನೀರಿನ ಸಮಸ್ಯೆ: ಈ ವರ್ಷ ಮುಂಗಾರು ಪೂರ್ವ ಮಳೆ ಬೀಳದೆ ನಗರದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ನಗರದ ಸೋಮವಾರಪೇಟೆ ಬಡಾವಣೆ ಹಾಗೂ ವಿವಿಧ ವಾರ್ಡ್ಗಳಲ್ಲಿ ನೀರಿಗಾಗಿ ಕೊರೆಸಲಾಗಿದ್ದ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ.

ಈಗಾಗಲೇ ನಗರಕ್ಕೆ ತಿ.ನರಸೀಪುರದಿಂದ ಸರಬರಾಜಾಗುವ ಕಾವೇರಿ ನೀರು ಸಾಕಾಗುತ್ತಿಲ್ಲ. ವಿವಿಧ ಬಡಾವಣೆಗಳಲ್ಲಿನ ಮನೆಗಳಲ್ಲಿಯೂ ಇರುವ ಬೋರ್‌ವೆಲ್‌ಗಳಲ್ಲಿಯೂ ನೀರು ಕಡಿಮೆಯಾಗಿ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ಹಾಕಿಸಿಕೊಳ್ಳುತ್ತಿದ್ಧಾರೆ. ಆದ್ದರಿಂದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ೧೫೮ ಕೋಟಿ ರೂ. ವೆಚ್ಚದ ಮಾಲಂಗಿ-ಚಾಮರಾಜನಗರ ಕಾವೇರಿ ಕುಡಿಯುವ ನೀರಿನ ಎಕ್ಸ್ಪ್ರೆಸ್ ಲೈನ್ ಯೋಜನೆ ಮಂಜೂರು ಮಾಡಿಸಿದ್ದಾರೆ. ಕಾಮಗಾರಿಯೂ ಆರಂಭವಾಗಿದೆ. ಇದರಡಿ ಪೈಪ್‌ಲೈನ್ ಕಾಮಗಾರಿ ಸಾಗಿದೆ.

” ನಗರದ ವಿವಿಧೆಡೆ ೧೦೦ ಕಿ.ಮೀ.ನಷ್ಟು ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಸಾಗಿದ್ದು, ಸದ್ಯದಲ್ಲೇ ಮುಗಿಯಲಿದೆ. ಸದ್ಯಕ್ಕೆ ಹಳೆಯ ಪೈಪ್ ಮೂಲಕವೇ ಕಾವೇರಿ ನೀರನ್ನು ಮನೆ ಮನೆಗೆ ಹರಿಸಲಾಗುವುದು. ಜೊತೆಗೆ ಹೊಸ ಪೈಪ್‌ಲೈನ್ ಮೂಲಕವೂ ನೀರು ಹರಿಸಲಾಗುವುದು. ಮನೆ ಮನೆಗಳಿಗೆ ನೀರಿನ ಮೀಟರ್ ಅಳವಡಿಕೆಯು ನಡೆದಿದೆ.”
– ಮಂಜುನಾಥ್, ಎಇಇ, ನಗರಸಭೆ

 

Tags:
error: Content is protected !!