Mysore
26
light intensity drizzle

Social Media

ಸೋಮವಾರ, 18 ಮೇ 2026
Light
Dark

ಕಬಿನಿ ಹಿನ್ನೀರಿಗೆ ಹಿಂಡು ಹಿಂಡಾಗಿ ವನ್ಯಪ್ರಾಣಿಗಳ ಲಗ್ಗೆ

ಮಂಜು ಕೋಟೆ

ಮೇವು, ಕುಡಿಯುವ ನೀರಿಗಾಗಿ ಬರುವ ವನ್ಯಪ್ರಾಣಿಗಳನ್ನು ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು

ಎಚ್.ಡಿ.ಕೋಟೆ: ಬಿಸಿಲಿನ ತಾಪಮಾನದಿಂದ ಮೇವು ಮತ್ತು ಕುಡಿಯುವ ನೀರಿಗಾಗಿ ತಾಲ್ಲೂಕಿನ ಕಬಿನಿ ಹಿನ್ನೀರಿನ ಪ್ರದೇಶಕ್ಕೆ ವನ್ಯಪ್ರಾಣಿಗಳು ಹಿಂಡು ಹಿಂಡಾಗಿ ಬರುತ್ತಿದ್ದು, ಇವುಗಳನ್ನು ಕಣ್ತುಂಬಿಕೊಳ್ಳಲು ಪ್ರತಿನಿತ್ಯ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ.

ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಒಂದೆಡೆ ಬಿಸಿಲಿನ ತಾಪ,ಮತ್ತೊಂದೆಡೆ ಕಬಿನಿ ಹಿನ್ನೀರಿನಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಮೇವು ಮತ್ತು ನೀರು ಅರಸಿ ಕಾಡಿನಲ್ಲಿರುವ ಆನೆಗಳು, ಜಿಂಕೆಗಳು, ಕಡವೇ ಇತರ ವನ್ಯಪ್ರಾಣಿಗಳು ಮಧ್ಯಾಹ್ನ ಮತ್ತು ಸಂಜೆ ವೇಳೆಯಲ್ಲಿ ನೂರಾರು ಸಂಖ್ಯೆಯಲ್ಲಿ ಹಿನ್ನೀರಿನ ಪ್ರದೇಶಕ್ಕೆ ಬರುತ್ತಿವೆ.

ಕಬಿನಿ ಹಿನ್ನೀರಿನ ಗುಂಡ್ರೆ, ಗುಂಡತ್ತೂರು ಮತ್ತು ಉದ್ದೂರು ಗೇಟ್ ಭಾಗದ ಅರಣ್ಯ ವ್ಯಾಪ್ತಿಯಲ್ಲಿ ಹಸಿರು ಹುಲ್ಲು ಮತ್ತು ಗಿಡಗಳು ಬೆಳೆದು ನಿಂತಿವೆ. ಇಲ್ಲಿ ತಂಪಾದ ವಾತಾವರಣ ಇರುವುದರಿಂದ ಗುಂಪು ಗುಂಪಾಗಿ ಆನೆಗಳು, ಜಿಂಕೆಗಳು, ಕಡವೆ, ಸಾಂಬಾ ಇನ್ನಿತರ ಪ್ರಾಣಿಗಳು ಮೇಯಲು ಬರುತ್ತಿದ್ದು, ಕತ್ತಲಾಗುತ್ತಿದ್ದಂತೆ ಪಕ್ಕದ ಅರಣ್ಯದೊಳಗೆ ವಾಪಸ್ ಹೋಗುತ್ತವೆ. ಇವುಗಳ ನಡುವೆ ಮಧ್ಯಾಹ್ನ ಮತ್ತು ಸಂಜೆ ವೇಳೆ ನೀರಿನೊಳಗಿರುವ ನೀರು ನಾಯಿಗಳು ಮತ್ತು ಮೊಸಳೆ ದಡಕ್ಕೆ ಬಂದು ಬಿಸಿಲು ಕಾದು ಮತ್ತೆ ನೀರಿಗೆ ಹೋಗುತ್ತವೆ.

ಮೊದಲೆಲ್ಲಾ ವನ್ಯಪ್ರಾಣಿಗಳು ಈ ಭಾಗದಲ್ಲಿ ಕಡಿಮೆ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಆದರೆ ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಹಿನ್ನೀರಿನ ಪ್ರದೇಶಕ್ಕೆ ನೂರಾರು ಪ್ರಾಣಿಗಳು ಮೇವು ಮತ್ತು ನೀರಿಗಾಗಿ ಆಗಮಿಸುತ್ತಿವೆ. ಇವುಗಳನ್ನು ವೀಕ್ಷಿಸಲು ಪ್ರತಿನಿತ್ಯ ನೂರಾರು ಜನರು ಸಂಜೆ ವೇಳೆ ಬರುತ್ತಿದ್ದಾರೆ. ಕೆಲವರು ಬೋಟಿನ ಮೂಲಕ ಹಿನ್ನೀರಿನಲ್ಲಿ ಹೋಗಿ ವೀಕ್ಷಿಸಿದರೆ, ಕೆಲವರು ದಡದಲ್ಲೇ ನಿಂತು ಪ್ರಾಣಿಗಳನ್ನು ನೋಡಿ ಖುಷಿಪಡುತ್ತಿದ್ದಾರೆ.

ಕಬಿನಿ ಹಿನ್ನೀರಿನ ಒಂದು ಭಾಗದ ಗುಂಡ್ರೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಮತ್ತು ಮತ್ತೊಂದು ಭಾಗವಾದ ಕಾಕನಕೋಟೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವನ್ಯ ಪ್ರಾಣಿಗಳು ಕಾಣಿಸಿಕೊಳ್ಳುತ್ತಿದ್ದು, ದೂರದಿಂದಲೇ ವೀಕ್ಷಿಸಬಹುದಾಗಿದೆ. ಆದರೆ ಅರಣ್ಯ ಇಲಾಖೆ ಮತ್ತು ಜಂಗಲ್ ಲಾಡ್ಜ್ ರೆಸಾರ್ಟ್ನ ಬೋಟ್‌ಗಳಲ್ಲಿ ಮಾತ್ರ ವನ್ಯಪ್ರಾಣಿಗಳ ಹತ್ತಿರ ಹೋಗಿ ವೀಕ್ಷಿಸಬಹುದಾಗಿದೆ. ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ ಕಾಡಿನಲ್ಲಿ ಕೆರೆಕಟ್ಟೆಗಳು ತುಂಬಿ ಗಿಡಮರಗಳೆಲ್ಲ ಹಸಿರಾಗುತ್ತಿದ್ದಂತೆ ವನ್ಯಪ್ರಾಣಿಗಳು ಕಾಡಿನೊಳಗೆ ಆಹಾರ ಅರಸಿ ಹೋಗಲಿವೆ. ಅಲ್ಲಿಯವರೆಗೆ ವನ್ಯ ಪ್ರಾಣಿಗಳನ್ನು ಹಿನ್ನೀರಿನಲ್ಲಿ ಪ್ರವಾಸಿಗರು ಮತ್ತು ಜನಸಾಮಾನ್ಯರು ನೋಡಿ ಸಂತಸಪಡಬಹುದಾಗಿದೆ.

” ಈ ವರ್ಷ ವನ್ಯಪ್ರಾಣಿಗಳು ಕಬಿನಿ ಹಿನ್ನೀರಿನ ದಡದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು, ವನ್ಯಜೀವಿ ಪ್ರೇಮಿಗಳು, ಛಾಯಾಗ್ರಾಹಕರ ಸಂಖ್ಯೆ ಹೆಚ್ಚಾಗಿದ್ದು, ಈ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು, ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು ಹರಸಾಹಸಪಡುತ್ತಿದ್ದೇವೆ.”

-ಸಮೀರ್ ಕೋಟೆ, ವನ್ಯಜೀವಿ ಛಾಯಾಗ್ರಾಹಕ 

” ಕಬಿನಿ ಹಿನ್ನೀರಿನ ಕಾಕನಕೋಟೆ, ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಪ್ರತಿನಿತ್ಯ ನೂರಕ್ಕೂ ಹೆಚ್ಚು ಆನೆಗಳು, ಜಿಂಕೆ, ಕಡವೆ, ಸಾಂಬಾರ್, ಕಾಡೆಮ್ಮೆ ಇನ್ನಿತರ ವನ್ಯಪ್ರಾಣಿಗಳು ಹಿನ್ನೀರಿನ ದಡದಲ್ಲಿ ಹಸಿರು ಮೇವು ತಿನ್ನಲು ತಮಿಳುನಾಡು, ಕೇರಳ ಭಾಗದ ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ವ್ಯಾಪ್ತಿಯಿಂದ ಗುಂಪು ಗುಂಪಾಗಿ ಬರುತ್ತವೆ. ಮಳೆ ಪ್ರಾರಂಭವಾಗುತ್ತಿದ್ದಂತೆ ಮತ್ತೆ ವಾಪಸ್ ಅವುಗಳ ಸ್ಥಳಗಳಿಗೆ ಹೋಗುತ್ತವೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವನ್ಯಪ್ರಾಣಿಗಳು ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿವೆ.”

– ಹನುಮಂತರರಾಜು, ಅರಣ್ಯ ಅಧಿಕಾರಿ, ಕಾಕನಕೋಟೆ ಅರಣ್ಯ ವಲಯ

 

Tags:
error: Content is protected !!