ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳ ಕಾಲ ಇದ್ದು, ಇದೀಗ ಭೂಮಿಗೆ ಮರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಆಗಸ್ಟ್ 17ರ ವೇಳೆಗೆ ಭಾರತಕ್ಕೆ ಬರುವ ಸಾಧ್ಯತೆಗಳಿವೆ.
ಬಾಹ್ಯಾಕಾಶ ಯಾನದಿಂದ ಭೂಮಿಗೆ ಬಂದಿರುವ ಶುಭಾಂಶು ಮುಂದಿನ ತಿಂಗಳು ಆಗಸ್ಟ್.17ರೊಳಗೆ ಭಾರತಕ್ಕೆ ಮರಳಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದಾರೆ.
ಶುಭಾಂಶು ಅವರ ಈ ಸಾಧನೆಯೊಂದಿಗೆ, ಭಾರತದ ಮಾನವ ಸಹಿತ ಬಾಹ್ಯಾಕಾಶ ಹಾರಾಟ ಗಗನಯಾನ ಕಾರ್ಯಾಚರಣೆಯ ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸಲು ಸಿದ್ಧತೆಗಳು ಪ್ರಾರಂಭವಾಗಿವೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋದ ಎರಡನೇ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ. ಅವರಿಗಿಂತ ಮೊದಲು, ರಾಕೇಶ್ ಶರ್ಮಾ 1984 ರಲ್ಲಿ ಸೋವಿಯತ್ ರಷ್ಯಾದ ಕಾರ್ಯಾಚರಣೆಯ ಅಡಿಯಲ್ಲಿ ಬಾಹ್ಯಾಕಾಶಕ್ಕೆ ಹೋಗಿದ್ದರು.
ಶುಭಾಂಶು ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮತ್ತು ಭೂಮಿಯ ಕಕ್ಷೆಯಲ್ಲಿ ಹೆಚ್ಚು ಕಾಲ (20 ದಿನಗಳು) ಉಳಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ನಿರ್ಮಿಸಿದ್ದರು.
40 ವರ್ಷಗಳ ನಂತರ ಹಂಗೇರಿ ಮತ್ತು ಪೋಲೆಂಡ್‍ನ ಗಗನಯಾತ್ರಿಗಳನ್ನು ಸಹ ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು. ಶುಭಾಂಶು ಮತ್ತು ಆಕ್ಸಿಯಮ್-4 ಮಿಷನ್‍ನ ಇತರ ಮೂವರು ಗಗನಯಾತ್ರಿಗಳು ಭಾರತೀಯ ಕಾಲಮಾನ ಮಧ್ಯಾಹ್ನ 3.01ಕ್ಕೆ ಪೆಸಿಫಿಕ್ ಮಹಾಸಾಗರದ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಇಳಿದಿದ್ದರು.





