ಕೋಮಲ್ ಬ್ಯಾಕ್ ಟು ಬ್ಯಾಕ್ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ಅವರ ಚಿತ್ರವೊಂದು ಬಿಡುಗಡೆಯಾಗಿ ಒಂದು ವರ್ಷವೇ ಆಗಿವೆ. ಕಳೆದ ವರ್ಷ ಇದೇ ಹೊತ್ತಿನಲ್ಲಿ ಅವರು ‘ಯಲಾ ಕುನ್ನಿ’ ಚಿತ್ರ ಹೆಚ್ಚು ಪ್ರಚಾರವಿಲ್ಲದೆ ಬಿಡುಗಡೆಯಾಗಿತ್ತು. ಇದೀಗ ಅವರ ಇನ್ನೊಂದು ಚಿತ್ರ ‘ಕೋಣ’ ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿದೆ.
ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟ್ರೇಲರ್ ಈಗಾಗಲೇ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದ್ದು, ಅಕ್ಟೋಬರ್ 02ರಂದು ‘ಕಾಂತಾರ – ಚಾಪ್ಟರ್ 1’ ಚಿತ್ರವು ಬಿಡುಗಡೆಯಾಗುತ್ತಿದ್ದು, ಆ ಚಿತ್ರದ ಜೊತೆಗೆ ಟ್ರೇಲರ್ ಚಿತ್ರಮಂದರಗಳಲ್ಲೂ ಬಿಡುಗಡೆಯಾಗಿವೆ.
ಇದನ್ನು ಓದಿ : ದಾಖಲೆಯ 7000 ಚಿತ್ರಮಂದಿರಗಳಲ್ಲಿ ‘ಕಾಂತಾರ – ಚಾಪ್ಟರ್ 1’ ಬಿಡುಗಡೆ
ಒಂದು ನೈಜ ಘಟನೆಯನ್ನು ಆಧರಿಸಿ ಈ ಚಿತ್ರ ತಯಾರಾಗಿದ್ದು ತೆರೆಗೆ ಬರಲು ಸಿದ್ಧವಾಗಿದೆ. ಕೋಮಲ್ ಕುಮಾರ್ ಇದುವರೆಗೂ ಕಾಣಿಸಿಕೊಂಡಿರದ ಪಾತ್ರವನ್ನು ‘ಕೋಣ’ ಸಿನಿಮಾದಲ್ಲಿ ನಿಭಾಯಿಸಿದ್ದಾರೆ. ಕಾಮಿಡಿ, ಆಕ್ಷನ್, ಸಸ್ಪೆನ್ಸ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. ಇಲ್ಲಿ ಕೋಮಲ್ ಹೊಸ ಅವತಾರದಲ್ಲಿ ಕಾಣಿಸುತ್ತಾರೆ.
ಈ ಚಿತ್ರದಲ್ಲಿ ಕೋಮಲ್‍ಗೆ ನಾಯಕಿಯಾಗಿ ತನಿಷಾ ಕುಪ್ಪಂಡ ನಟಿಸುತ್ತಿದ್ದು, ಮಿಕ್ಕಂತೆ ಕೀರ್ತಿರಾಜ್, ನಮ್ರತಾ ಗೌಡ, ವಿನಯ್ ಗೌಡ, ರಾಘು ರಾಮನಕೊಪ್ಪ, ವಿಜಯ್ ಚೆಂಡೂರ್, ಎಂ.ಕೆ.ಮಠ್, ರಂಜಿತ್ ಗೌಡ, ತುಕಾಲಿ ಸಂತೋಷ್, ಹುಲಿ ಕಾರ್ತಿಕ್, ಜಗ್ಗಪ್ಪ ಮುಂತಾದವರು ನಟಿಸಿದ್ದಾರೆ.
ಈ ಹಿಂದೆ ಜಗ್ಗೇಶ್ ನಟನೆಯ ‘8 MM’ ಚಿತ್ರವನ್ನು ನಿರ್ದೇಶಿಸಿದ್ದ ಎಸ್. ಹರಿಕೃಷ್ಣ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕುಪ್ಪಂಡಾಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಪಾಲ್ ಮತ್ತು ರವಿಕಿರಣ್ ಈ ಚಿತ್ರವನ್ನು ನಿರ್ಮಿಸಿದ್ದು, ಶಶಾಂಕ್ ಶೇಷಗಿರಿ ಸಂಗೀತ ಮತ್ತು ವೀನಸ್ ನಾಗರಾಜ ಮೂರ್ತಿ ಛಾಯಾಗ್ರಹಣವಿದೆ.





