ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಹೊತ್ತಿನಲ್ಲೇ ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಶಾಕ್ ಎದುರಾಗಿದೆ.
ಮೊನ್ನೆಯಷ್ಟೇ ಎಎಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಎಂಟು ಮಂದಿ ಶಾಸಕರು ಶನಿವಾರ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದಿದ್ದಕ್ಕೆ ಕೋಪಗೊಂಡು ರಾಜೀನಾಮೆ ನೀಡಿದ್ದ ಎಂಟು ಮಂದಿ ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದು, ಇದೀಗ ಬಿಜೆಪಿಗೆ ಆನೆ ಬಲ ಬಂದಂತಾಗಿದೆ.
ನರೇಶ್ ಯಾದವ್, ರೋಹಿತ್ ಕುಮಾರ್, ರಾಜೇಶ್ ರಿಷಿ, ಮದನ್ ಲಾಲ್, ಪವನ್ ಶರ್ಮಾ, ಭಾವನಾ ಗೌಡ್, ಬಿ.ಎಸ್.ಜೂನ್ ಮತ್ತು ಗಿರೀಶ್ ಸೋನಿ ಬಿಜೆಪಿ ಸೇರ್ಪಡೆಯಾಗಿದ್ದು, ಮತ್ತೆ ಸಿಎಂ ಆಗುವ ಅರವಿಂದ್ ಕೇಜ್ರಿವಾಲ್‌ಗೆ ಬಿಗ್ ಶಾಕ್ ಎದುರಾಗಿದೆ.
ದೆಹಲಿ ಬಿಜೆಪಿಯ ಉಸ್ತುವಾರಿ ಬೈಜಯಂತ್ ಪಾಂಡಾ ಮತ್ತು ರಾಜ್ಯಾಧ್ಯಕ್ಷ ವಿರೇಂದ್ರ ಸಚ್‌ದೇವ ಅವರ ಸಮ್ಮುಖದಲ್ಲೇ ಬಿಜೆಪಿ ಸೇರ್ಪಡೆಯಾಗಿದ್ದು, ಅರವಿಂದ್ ಕೇಜ್ರಿವಾಲ್‌ಗೆ ಟಕ್ಕರ್ ಕೊಡಲು ಮುಂದಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಎಂಟು ಮಂದಿ ಶಾಸಕರು, ಅರವಿಂದ್ ಕೇಜ್ರಿವಾಲ್ ಅವರ ನಿರ್ಧಾರದ ವಿರುದ್ಧ ಕಿಡಿಕಾರಿದ್ದು, ಎಎಪಿ ಭ್ರಷ್ಟಾಚಾರ-ಮುಕ್ತ ಆಡಳಿತ ಮತ್ತು ಪಾರದರ್ಶಕತೆಯ ತತ್ವಗಳಿಗೆ ದ್ರೋಹ ಬಗೆದಿದೆ. ಪಕ್ಷವು ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದ ಕೊಳಚೆ ಗುಂಡಿಯಾಗಿದೆ ಎಂದು ಟೀಕೆ ಮಾಡಿದ್ದಾರೆ.