ಮೈಸೂರು : ದಸರಾ ಆನೆಗಳ ಸೊಂಡಿಲು, ದಂತ ಹಿಡಿದುಕೊಂಡು ಫೋಟೋ ರೀಲ್ಸ್ ಮಾಡಿ ಸಾಮಾಜಿಕ ತಾಣಗಳಲ್ಲಿ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತದಕ್ಕೆ ಕಡಿವಾಣ ಹಾಕಲಾಗಿದೆ ಎಂದು ಸಚಿವ ಈಶ್ವರ್ ಬಿ. ಖಂಡ್ರೆತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಆನೆಗಳನ್ನು ಪಳಗಿಸಿದ್ದರೂ, ಕೆಲವೊಂದು ಸಂದರ್ಭದಲ್ಲಿ ಪ್ರಾಣಿಗಳ ವರ್ತನೆಯನ್ನು ಊಹಿಸುವುದೂ ಅಸಾಧ್ಯ. ಹೀಗಾಗಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಆನೆಗಳ ಬಳಿ ಯಾರಿಗೂ ಬಿಡದಂತೆ ಸೂಚನೆ ನೀಡಲಾಗಿದೆ. ಆದರೂ ಕೆಲವರು ಫೋಟೋ, ರೀಲ್ಸ್ ಮಾಡಿದ್ದು ಇಂತಹವರಿಗೆ ನಿರ್ದಾಕ್ಷಿಣ್ಯವಾಗಿ ದಂಡ ಹಾಕಲು ಸೂಚಿಸಲಾಗಿದೆ ಎಂದರು.
ಇದನ್ನು ಓದಿ : ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ಗಜಪಡೆಗೆ ಜಂಬೂಸವಾರಿ ರಿಹರ್ಸಲ್
ಕಳೆದ 18ರಂದು ಮಹಿಳೆಯೊಬ್ಬರು ಸಿಬ್ಬಂದಿಯ ಕಣ್ತಪ್ಪಿಸಿ ರೀಲ್ಸ್ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿದೆ. ಇದು ಮೇಲ್ನೋಟಕ್ಕೆ ಕರ್ತವ್ಯಲೋಪವಾಗಿದೆ ಎಂಬುದನ್ನು ಪುಷ್ಟೀಕರಿಸಿದ್ದು, ಅಧಿಕಾರಿ, ಸಿಬ್ಬಂದಿಗೂ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಯಸಳೂರಿನಲ್ಲಿ ಅರ್ಜುನ ಆನೆ ಸ್ಮಾರಕ ಅನಾವರಣ:
ಮೈಸೂರು ದಸರಾ ಜಂಬೂಸವಾರಿಯಲ್ಲಿ 8 ಬಾರಿ ಅಂಬಾರಿ ಹೊತ್ತು ಗಜಗಾಂಭೀರ್ಯದಿಂದ ಹೆಜ್ಜೆಹಾಕುತ್ತಾ ಜನಮನ ಗೆದ್ದಿದ್ದ ಅರ್ಜುನ ಆನೆ ಹಾಸನ ಜಿಲ್ಲೆ ಯಸಳೂರು ಬಳಿ ಆನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾಗಿದ್ದು, ಸರ್ಕಾರ ಅರ್ಜುನ ಇದ್ದ ನಾಗರಹೊಳೆಯ ಬಳ್ಳೆ ಮತ್ತು ಯಸಳೂರಿನಲ್ಲಿ ಸ್ಮಾರಕ ನಿರ್ಮಿಸಿದೆ ಎಂದರು.
ಈಗಾಗಲೇ ಬಳ್ಳೆಯ ಸ್ಮಾರಕವನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಾಗಿದ್ದು, ಈ ತಿಂಗಳಲ್ಲಿ ಯಸಳೂರಿನಲ್ಲೂ ಅರ್ಜುನ ಆನೆ ಸ್ಮಾರಕ ಉದ್ಘಾಟಿಸುವುದಾಗಿ ತಿಳಿಸಿದರು.





