ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಹೀಗಿದೆ.
ಈ ದಿನ ದಸರಾ ಮಹೋತ್ಸವವನ್ನು ಬಾನು ಮುಷ್ತಾಕ್ ಅವರು ಉದ್ಘಾಟನೆ ಮಾಡಿದ್ದಾರೆ. ನಾವು ಎಲ್ಲರೊಂದಿಗೆ ಪರಸ್ಪರ ಪ್ರೀತಿಯಿಂದ ಇರಬೇಕು. ಪರಸ್ಪರ ದ್ವೇಷದಿಂದ ಇರಬಾರದು. ಅದು ಮನುಷ್ಯತ್ವದ ಲಕ್ಷಣವಲ್ಲ ಎಂದರು.
ಎಲ್ಲರೂ ಇತಿಹಾಸ ತಿಳಿದುಕೊಳ್ಳಬೇಕು. ಎಲ್ಲರೂ ಸಂವಿಧಾನದ ಮಹತ್ವ ತಿಳಿದುಕೊಳ್ಳಬೇಕು. ಯಾರೂ ಕೂಡ ರಾಜಕೀಯ ಮಾಡಬಾರದು. ರಾಜಕೀಯ ಮಾಡುವುದಾದರೂ ಚುನಾವಣೆ ಸಂದರ್ಭದಲ್ಲಿ ಮಾಡಬೇಕು. ಯಾರನ್ನೋ ಓಲೈಕೆಗೋಸ್ಕರ ರಾಜಕಾರಣ ಮಾಡಬಾರದು. ಓಲೈಕೆ ರಾಜಕಾರಣದಿಂದ ನಷ್ಟವೇ ಜಾಸ್ತಿ ಎಂದು ಅಸಮಾಧಾನ ಹೊರಹಾಕಿದರು.
ಲೇಖಕಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುವ ಮೂಲಕ ಕನ್ನಡ ನಾಡಿಗೆ ಗೌರವ ತಂದುಕೊಟ್ಟಂತಾಗಿದೆ ಎಂದು ಬಾನು ಮುಷ್ತಾಕ್ ಅವರನ್ನು ಹಾಡಿ ಹೊಗಳಿದರು.
ಈ ಬಾರಿ ದಸರಾ ಮಹೋತ್ಸವ 11 ದಿನಗಳ ಕಾಲ ನಡೆಯುತ್ತದೆ. ಈ ಬಾರಿ ವಿಶೇಷವಾಗಿ ದಸರಾ ನಡೆಯಲಿದೆ. ಶಾಸ್ತ್ರೋಕ್ತವಾಗಿಯೇ ನಾವು ದಸರಾ ಮಾಡುತ್ತಿದ್ದೇವೆ. ಈ ಬಾರಿ ಜಂಬೂಸವಾರಿಯಲ್ಲಿ ವಿಶೇಷ ಮೆರುಗು ನೀಡುವ ಕೆಲಸ ಮಾಡುತ್ತಿದ್ದೇವೆ.
ತಾರತಮ್ಯ, ಅಸಮಾನತೆ ಹೋಗಲಾಡಿಸಲೆಂದೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಎಲ್ಲಾ ಪಕ್ಷದವರೂ ಗ್ಯಾರಂಟಿ ಯೋಜನೆಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ತಾರತಮ್ಯ, ಅಸಮಾನತೆಯನ್ನು ಹೋಗಲಾಡಿಸಬೇಕು ಎಂದು ಕರೆ ನೀಡಿದರು.





