ಮೈಸೂರು: ಇಂದಿನ ಯುವ ಪೀಳಿಗೆಯು ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಆದರಿಂದ ಹೊರ ಬಂದು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವುದರಿಂದ ಭೌದ್ದಿಕವಾಗಿ ಬಲಾಢ್ಯರಾಗಲು ಸಾಧ್ಯವಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.
ಇಂದು (ಫೆ.3) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ಪ್ರೊ.ಎನ್.ಲಕ್ಷ್ಮೀ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ, ʼಅರಿವಿನ ಸಿರಿʼ ಅಭಿನಂದನಾ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು.
ನಮ್ಮ ದೇಶದಲ್ಲಿರುವ ಅವೈಜ್ಞಾನಿಕತೆಯನ್ನು ತೊಲಗಿಸಲು ಶಿಕ್ಷಣ ಬಹಳ ಮುಖ್ಯವಿದೆ. ಮೂಢನಂಬಿಕೆ, ಅನಾಗರಿಕತೆ, ಹಾಗೂ ಶೋಷಣೆಯನ್ನು ಶಿಕ್ಷಣದಿಂದ ಮಾತ್ರ ತೊಡೆದು ಹಾಕಲು ಸಾದ್ಯ. ಈ ನಿಟ್ಟಿನಲ್ಲಿ ಯುವ ಸಮೂಹವು ಶಿಕ್ಷಣದ ಕಡೆಗೆ ಹೆಚ್ಚು ಗಮನ ನೀಡಬೇಕು ಎಂದು ಹೇಳಿದರು.
ʼಶಿಕ್ಷಣವು ಹುಲಿಯ ಹಾಲಿನಂತೆ ಅದನ್ನು ಕುಡಿದವರು ಘರ್ಜಿಸಲೇಬೇಕುʼ ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತಿನಂತೆ ಬಡತನದಿಂದ ಬಂದ ಪ್ರೊ.ಎನ್.ಲಕ್ಷ್ಮೀ ಅವರು ವಿದ್ಯಾವಂತರಾಗಿ ಪ್ರಾಧ್ಯಾಪಕರ ವೃತ್ತಿಯಲ್ಲಿ ಸೇವೆ ಸಲ್ಲಿಸಿ, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶ್ಲಾಘನೆ ಮಾಡಿದರು.