ಮೈಸೂರು: ವಾಜಮಂಗಲ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಜೆಡಿಎಸ್ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಡಾ ಅನ್ನದಾನಿ ಆಗ್ರಹಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲೇ ಇಂತಹ ಘಟನೆ ನಡೆದಿದ್ದರೂ, ಸಿದ್ದರಾಮಯ್ಯ ಮಾತ್ರ ಇದುವರೆಗೂ ಘಟನೆಯನ್ನು ವಿಷಾದಿಸಿಲ್ಲ. ಘಟನೆ ಬಗ್ಗೆ ಒಂದು ಹೇಳಿಕೆಯನ್ನಾದರೂ ನೀಡಿ ವಿಷಾದಿಸಬೇಕು. ತಪ್ಪಿತಸ್ಥರನ್ನು ಇನ್ನೂ ಬಂಧಿಸಿಲ್ಲ. ಸಿಎಂ ಬಳಿ ಇಂಟಲಿಜೆನ್ಸ್ ಇದೆ. ಆದರೂ ಆರೋಪಿಗಳನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು.
ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಶಿಕ್ಷೆಯ ಜೊತೆಗೆ ತಪ್ಪು ಮಾಡಿದವನಿಗೆ ಸಂವಿಧಾನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಪಾಠ ಮಾಡಬೇಕು. ಘಟನೆ ನಡೆದ ಬಳಿಕ ಸ್ಥಳೀಯರು ಅಸಮಾಧಾನಗೊಂಡಿದ್ದಾರೆ. ಸಿಎಂ ಪುತ್ರ ಡಾ.ಯತೀಂದ್ರ ಮಾತ್ರ ಬಂದಿದ್ದರು ಅಷ್ಟೇ. ಆದರೆ ಇನ್ನೂ ಕ್ರಮವಾಗಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಅಂಬೇಡ್ಕರ್ ಬಗ್ಗೆ ಮಾತನಾಡುವ ಸಿಎಂ ವಿಷಾದವನ್ನಾದರೂ ವ್ಯಕ್ತಪಡಿಸಲಿ ಎಂದು ಆಗ್ರಹಿಸಿದರು.
ಇನ್ನು ಪಾಕಿಸ್ತಾನ ವಿರುದ್ಧ ಯುದ್ಧ ಬೇಡ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡನೀಯ. ಯುದ್ಧ ಬೇಡ ಅಂದ್ರೆ ಏನು ಅರ್ಥ..? ಪಾಕಿಸ್ತಾನದವರು ಹೊಡೆದ್ರು ಸುಮ್ಮನಿರೋಕೆ ಅಗುತ್ತಾ? ಉಗ್ರರನ್ನು ಸೆದೆ ಬಡಿಯಬೇಕು. ಯಾವುದೇ ಕಾರಣಕ್ಕೂ ಸಿಎಂ ಆದವರೂ ಈ ರೀತಿ ಹೇಳಿಕೆ ನೀಡಬಾರದು ಎಂದರು.





