ಮೈಸೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದಿನ ಕೇಂದ್ರ ಬಜೆಟ್ ದೂರದೃಷ್ಟಿ ಇಲ್ಲದ, ದೇಶದ ಹಿತದೃಷ್ಟಿಯಿಂದ ಕರ್ನಾಟಕದ ಹಿತದೃಷ್ಟಿಯಿಂದ ಬಹಳ ನಿರಾಶದಾಯಕ ಬಜೆಟ್ ಆಗಿದೆ ಎಂದು ಟೀಕೆ ಮಾಡಿದ್ದಾರೆ.
ಈ ಬಾರಿಯ ಬಜೆಟ್ ಹೈಲೈಟ್ಸ್‌ಗಳನ್ನು ಗಮನಿಸಿದ್ದೇನೆ. ಇದೊಂದು ನಿರಾಶದಾಯಕ ಬಜೆಟ್. ಬಜೆಟ್‌ಗೂ ಮೊದಲೇ ಪೂರ್ವಭಾವಿ ಸಭೆಗೆ ಕರೆದಿದ್ದರು. ರಾಜ್ಯದಿಂದ ಸಚಿವ ಕೃಷ್ಣಭೈರೇಗೌಡ ಭೇಟಿ ನೀಡಿದ್ದರು. ನಾವು ರಾಜ್ಯದಿಂದ ಹಲವು ಬೇಡಿಕೆ ಇಟ್ಟಿದ್ದೆವು. ಆದರೆ ನಮ್ಮ ಬೇಡಿಕೆಗಳು ಕೇವಲ ಬೇಡಿಕೆಗಳಾಗಿವೆ. ಬಜೆಟ್‌ನಲ್ಲಿ ಒಂದೇ ಒಂದು ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು 50 ಲಕ್ಷದ 65 ಸಾವಿರದ 345 ಕೋಟಿ ರೂ ಬಜೆಟ್ ಮಂಡಿಸಿದ್ದು, ಅದರಲ್ಲಿ ಕರ್ನಾಟಕಕ್ಕೆ ಏನೂ ಇಲ್ಲ ಎಂದು ಕಿಡಿಕಾರಿದರು.
ಇನ್ನು ಹೆಚ್ಚು ತೆರಿಗೆ ಕೊಡುವ ರಾಜ್ಯಗಳಲ್ಲಿ ಕರ್ನಾಟಕ ನಂ.2 ಆಗಿದೆ. ಆದರೆ ನಮ್ಮ ರಾಜ್ಯವನ್ನು ಬಿಟ್ಟು ಬಿಹಾರ ಹಾಗೂ ಆಂಧ್ರಪ್ರದೇಶದಕ್ಕೆ ಹೆಚ್ಚಿನ ಹಣ ಬಿಡುಗಡೆ ಮಾಡಲಾಗಿದೆ ಎಂದು ಕಿಡಿಕಾರಿದರು.
ಒಟ್ಟಾರೆಯಾಗಿ ಈ ಬಜೆಟ್ ಅತ್ಯಂತ ನಿರಾಶದಾಯಕ. ಕರ್ನಾಟಕಕ್ಕೆ ವಿರುದ್ಧವಾಗಿರುವ ಬಜೆಟ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಮುಂದುವರಿದು ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಇದುವರೆಗೂ ಬಜೆಟ್‌ನಲ್ಲಿ ನಮಗೆ ಘೋಷಣೆ ಮಾಡಿ ಚೊಂಬು ನೀಡಿದ್ರು. ಅದೇ ರೀತಿ ಈಗ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೂ ಚೊಂಬು ಕೊಡ್ತಾರೆ ಎಂದು ಲೇವಡಿ ಮಾಡಿದರು.