ಮೈಸೂರು: ನಾವು ಮಾಡುತ್ತಿರುವುದು ಜಾತಿ ಗಣತಿಯಲ್ಲ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನ ಯಾವ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಕೊಳ್ಳಲು ಈ ಸಮೀಕ್ಷೆ ಮಾಡುತ್ತಿದ್ದೇವೆ. ನಿನ್ನೆಯಿಂದಷ್ಟೇ ಸಮೀಕ್ಷೆ ಆರಂಭವಾಗಿದೆ. ಎಲ್ಲಿಯೂ ಏನು ಸಮಸ್ಯೆ ಉಂಟಾಗಿಲ್ಲ. ಖುದ್ದು ನಾನೇ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಎಲ್ಲಾ ಕಡೆಯು ಚೆನ್ನಾಗಿ ನಡೆಯುತ್ತಿದೆ.
ಬಿಜೆಪಿಯವರು ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಜಾತಿ ಗಣತಿ ಮಾಡುತ್ತಿರುವುದು ಕೇಂದ್ರ ಸರ್ಕಾರ ಎಂದು ಹೇಳಿದರು.
ಇದನ್ನು ಓದಿ : ಸಿನಿಪ್ರಿಯರಿಗೆ ಶಾಕ್: ಸಿನಿಮಾ ಟಿಕೆಟ್ ದರ 200ರೂ ನಿಗದಿಗೆ ಹೈಕೋರ್ಟ್ ತಡೆಯಾಜ್ಞೆ
ಇನ್ನು ಜಿಎಸ್‌ಟಿ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಈಗ ಎಲ್ಲರಿಗೂ ಜಿಎಸ್‌ಟಿ ಲಡ್ಡು ತಿನ್ನಿಸುತ್ತಿದೆ. ಜಿಎಸ್‌ಟಿ ಹೊಸ ನೀತಿಯಿಂದ ದೊಡ್ಡ ಬದಲಾವಣೆ ಆಗುತ್ತಿಲ್ಲ. GST ಹೊರೆ ಕಮ್ಮಿ ವಿಚಾರವನ್ನು ನೋಡುವುದಾದ್ರೆ ರಾಜ್ಯದ ಮಟ್ಟಿಗೆ ತಲಾ 57 ರೂ ಅಷ್ಟೇ. ಆದರೆ ಸಿದ್ದರಾಮಯ್ಯನವರು ಪ್ರತಿ ತಿಂಗಳು 2 ಸಾವಿರ ಕೊಡುತ್ತಿದ್ದಾರೆ. 200 ಯುನಿಟ್ ವಿದ್ಯುತ್ ನೀಡಿ ಮನೆ ಬೆಳಗುತ್ತಿದ್ದಾರೆ.
GST ಪಾಲು ರಾಜ್ಯಕ್ಕೆಷ್ಟು ಕಡಿಮೆ ಸಿಗುತ್ತಿದೆ ಎಂಬುದನ್ನು ಚಿಂತನೆ ಮಾಡಬೇಕು. ಇದರ ಬಗ್ಗೆ ನಮ್ಮ ಸಂಸದರು ಧ್ವನಿ ಎತ್ತದೆ ಇರುವುದು ಬೇಸರ ತಂದಿದೆ. GST ಲಡ್ಡು ಕೇವಲ ಬಿಜೆಪಿಗರಿಗಷ್ಟೇ ಸಿಹಿಯಾಗಿದೆ, ಆದರೆ ರಾಜ್ಯದ ಜನರಿಗೆ ಕಹಿಯಾಗಿದೆ ಎಂದು ಜಿಎಸ್‌ಟಿ ಪರಿಷ್ಕರಣೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.





