ಮೈಸೂರು: ಬರೀ ಸುಳ್ಳು ಹೇಳಿಕೊಂಡು ರಾಜ್ಯಾದ್ಯಂತ ತಿರುಗುವುದೇ ವಿಪಕ್ಷ ನಾಯಕರ ಕೆಲಸ ಎಂದು ಸಚಿವ ಕೆ.ವೆಂಕಟೇಶ್ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ಸರ್ಕಾರದ ಸಾಧನೆ ಶೂನ್ಯ ಎಂಬ ವಿಪಕ್ಷಗಳಿಗೆ ಟಾಂಗ್ ಕೊಟ್ಟರು. ಬಿಜೆಪಿಯವರು ಹೇಳಿಕೊಂಡು ತಿರುಗುತ್ತಿದ್ದಾರೆ. ಅದಕ್ಕೆ ಉತ್ತರವಾಗಿ ನೀಡಲು ಈ ಸಮಾವೇಶ ಮಾಡುತ್ತಿದ್ದೇವೆ.
ಹಲವಾರು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆದಿದೆ. ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿರುವ ವಿಪಕ್ಷಗಳಿಗೆ ಉತ್ತರ ನೀಡಲೆಂದೇ ಈ ಸಮಾವೇಶ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಬಡವರ ಪರ ಇದೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸುಳ್ಳು ಆಪಾದನೆ ಮೂಲಕ ಮತ್ತೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಐದು ಗ್ಯಾರಂಟಿಗಳಿಂದ ಜನರಿಗೆ ತುಂಬಾ ಉಪಯೋಗವಾಗುತ್ತಿದೆ. ಜನರ ಕಷ್ಟ ಕಡಿಮೆ ಮಾಡಲೆಂದೇ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಜನರು ಸಹ ಅದನ್ನು ಒಪ್ಪಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಲ್ಲ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ. ಆದರೂ ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.





