ಮೈಸೂರು: ರಾಜವಂಶಸ್ಥರಿಗೆ ಸೇರಿದ ಬೆಂಗಳೂರು ಅರಮನೆಯನ್ನು ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ವಶಕ್ಕೆ ಪಡೆಯಲು ಯತ್ನಿಸುತ್ತಿದೆ. ಆಗೇನಾದರೂ ಆದರೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸುತ್ತೇವೆ ಎಂದು ಅರಸು ಮಂಡಳಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಅರಸು ಮಂಡಳಿ ಸಂಘದ ಅಧ್ಯಕ್ಷ ಮನೋಜ್ ಅರಸು, ನಮ್ಮ ಜನಸಂಖ್ಯೆ ಕಡಿಮೆ ಇದೆ ಎಂದು ಸರ್ಕಾರ ಪದೇ ಪದೇ ನಮ್ಮನ್ನು ಗುರಿಯಾಗಿಸಿಕೊಂಡು ಆಸ್ತಿಯ ಮೇಲೆ ದಾಳಿ ನಡೆಸುತ್ತಿದೆ ಎಂದು ಕಿಡಿಕಾರಿದರು.
ಯಾವುದೇ ಒಂದು ಆಸ್ತಿಯನ್ನು ವಶಪಡಿಸಿಕೊಳ್ಳಬೇಕಾದರೆ ಸೂಕ್ತ ಪರಿಹಾರ ನೀಡಿ ವಶಪಡಿಸಿಕೊಳ್ಳಬೇಕು ಎಂದು ಸಂವಿಧಾನದಲ್ಲಿ ಹೇಳಿದೆ. ಆದರೆ ರಾಜ್ಯ ಸರ್ಕಾರ ಸಂವಿಧಾನವನ್ನು ಪಾಲಿಸದೇ ರಾಜಮನೆತನದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದೆ. ಟಿಡಿಆರ್ ನೀಡದೇ ವಶಕ್ಕೆ ಮುಂದಾಗಿರುವುದು ಖಂಡನೀಯ ಎಂದು ಆರೋಪಿಸಿದರು.
ಪ್ರಬಲ ಸಮುದಾಯವಾಗಿದ್ದರೆ ಸರ್ಕಾರ ಈ ರೀತಿ ಮಾಡುತ್ತಿರಲಿಲ್ಲ. ಇವರ ಸಂಖ್ಯೆ ಕಡಿಮೆ ಇದೆ ಎಂದು ಈ ರೀತಿಯ ಧೋರಣೆ ತೋರುತ್ತಿದ್ದಾರೆ. ರಾಜ್ಯಕ್ಕೆ ಮೈಸೂರು ರಾಜರ ಕೊಡುಗೆ ಅಪಾರ. ಅವರು ಮಾಡಿರುವ 50% ಕೆಲಸವನ್ನು ಈಗಿರುವ ಯಾವುದೇ ಸರ್ಕಾರಗಳು ಮಾಡಿಲ್ಲ. ಹಾಗಾಹಿ ಸುಗ್ರೀವಾಜ್ಞೆಯನ್ನು ಸಿಎಂ ಸಿದ್ದರಾಮಯ್ಯ ಅವರು ವಾಪಸ್ ಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು