ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಳೆ ಭಾರೀ ಅವಾಂತರ ಸೃಷ್ಟಿಸಿದ್ದು, ನಂಜನಗೂಡು-ಊಟಿ ಮುಖ್ಯ ರಸ್ತೆಯಲ್ಲಿ ಗುಂಡಿ ಬಿದ್ದಿದೆ.
ಮೈಸೂರಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿರುವ ಪರಿಣಾಮ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜು ಮುಂಭಾಗದ ಬಸ್ ತಂಗುದಾಣದ ಬಳಿ ಅವಾಂತರ ಸೃಷ್ಟಿಯಾಗಿದ್ದು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಷ್ಟ್ರೀಯ ಹೆದ್ದಾರಿ 766ರ ಮುಖ್ಯ ರಸ್ತೆಯಲ್ಲೇ ಮೊಣಕಾಲುದ್ದ ಗುಂಡಿಯಾಗಿದ್ದು, ಬಸ್ ತಂಗುದಾಣದ ಬಳಿ ರಸ್ತೆಯೂ ಕೆಸರುಮಯವಾಗಿದೆ. ಪರಿಣಾಮ ವಾಹನಗಳ ಸಂಚಾರದ ಸಂದರ್ಭದಲ್ಲಿ ಜನರ ಬಟ್ಟೆಗಳಿಗೆ ಕೆಸರು ಹಾರುತ್ತಿದ್ದು, ವಾಹನ ಸವಾರರು ಹಾಗೂ ಪಾದಾಚಾರಿಗಳಿಗೆ ತೀವ್ರ ಕಿರಿಕಿರಿ ಉಂಟು ಮಾಡಿದೆ.
ಹೈವೇ ರಸ್ತೆಯ ಪರಿಸ್ಥಿತಿ ಈ ರೀತಿಯಾದರೆ ಉಳಿದ ರಸ್ತೆಗಳ ಪರಿಸ್ಥಿತಿ ಹೇಗಿರುತ್ತದೆ.? ಎಂದು ಪ್ರಶ್ನೆ ಮಾಡುತ್ತಿರುವ ಜನತೆ, ಸ್ವಚ್ಛ ನಗರಿ ಎನ್ನುವ ಮೈಸೂರಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.





