ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಸಿಎಂ ಪತ್ನಿ ಪಾರ್ವತಿಗೆ ಬಿಗ್ ರಿಲೀಫ್ ಸಿಕ್ಕಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಆಚರಿಸಿದರು.
ಮೈಸೂರಿನ ಲೋಕಾಯುಕ್ತ ಕಚೇರಿ ಮುಂದೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಸತ್ಯ ಮೇವ ಜಯತೆ ಎಂದು ಬಿತ್ತಿ ಪತ್ರ ಹಿಡಿದು ಸಂಭ್ರಮಿಸಿದರು. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯ ಕುಮಾರ್, ನಗರಾಧ್ಯಕ್ಷ ರಘು ಸೇರಿದಂತೆ ಅನೇಕ ಕೈ ಕಾರ್ಯಕರ್ತರು ಭಾಗಿಯಾಗಿ ಪರಸ್ಪರ ಸಿಹಿ ತಿನ್ನಿಸಿ ಖುಷಿಪಟ್ಟರು.
ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು, ಇಡಿಯು ಬಿಜೆಪಿ ಏಜೆಂಟ್ ರೀತಿ ವರ್ತನೆ ಮಾಡುತ್ತಿದೆ. ಆರ್‌ಎಸ್‌ಎಸ್ ಕೂಲಿಕಾರರಾಗಿ ಇಡಿ ಕೆಲಸ ಮಾಡುತ್ತಿದೆ. ಮುಡಾ ಸೈಟ್‌ನಲ್ಲಿ ಮನಿ ಲಾಡರಿಂಗ್ ಎಲ್ಲಿ ಆಗಿದೆ ಎಂದು ಪ್ರಶ್ನಿಸಿದ ಅವರು, ದೂರುದಾರ ಸ್ನೇಹ ಮಯಿ ಕೃಷ್ಣ ಒಬ್ಬ ಕ್ರಿಮಿನಲ್. ಅವನು ಸಾಯುವವರೆಗೂ ಇದೇ ರೀತಿ ಹೇಳಿಕೊಂಡು ತಿರುಗಬೇಕು. ಹೈಕೋರ್ಟ್ ಆದೇಶ ಬಹಳ ಸ್ಪಷ್ಟವಾಗಿದೆ. ಲೋಕಾಯುಕ್ತ ತನಿಖೆ ಮಾಡುವಾಗ ಇಡಿ ತನಿಖೆ ಮಾಡುವ ಅವಶ್ಯಕತೆ ಇಲ್ಲ. ಆದರೂ ಸುಪ್ರೀಂಕೋರ್ಟ್‌ಗೆ ಅಪೀಲ್ ಮಾಡಿಕೊಂಡಿದ್ದಾರೆ. ಸುಪ್ರೀಂಕೋರ್ಟ್ ಇಡಿಗೆ ಚೀಮಾರಿ ಹಾಕಿದೆ. ಇಡಿಯನ್ನು ಕ್ಲೋಸ್ ಮಾಡಿಸಬೇಕು. ಬಿಜೆಪಿಯವರು ಇಡಿ, ಸಿಬಿಐ ಹಾಗೂ ಎನ್‌ಐಎಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುವುದನ್ನು ಬಿಡಬೇಕು ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.





