ಮೈಸೂರು: ಬಿ.ಎಸ್.ಯಡಿಯೂರಪ್ಪ ಅವರ ಸತತ ಪ್ರಯತ್ನ ಹಾಗೂ ಸಂಸದ ರಾಘವೇಂದ್ರ ಅವರ ಪರಿಶ್ರಮದಿಂದ ಸಿಗಂದೂರು ಸೇತುವೆ ಆಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸಿಗಂದೂರು ಸೇತುವೆ ಉದ್ಘಾಟನೆ ಕುರಿತು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವೆ ಜಟಾಪಟಿ ಮುಂದುವರಿದಿರುವ ಬಗ್ಗೆ ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಷ್ಟಾಚಾರ ಅಂದರೆ ಏನೂ ಸಿಎಂ? ಎಂದು ಪ್ರಶ್ನೆ ಮಾಡಿದರು. ಕೇಂದ್ರವೂ ಸಿಎಂರನ್ನು ಕರೆದಿದೆ, ಸಂಸದ ರಾಘವೇಂದ್ರ ಅವರು ಸಿಎಂರನ್ನು ಕರೆದಿದ್ದಾರೆ. ಬೇರೆ ಇನ್ನು ಯಾವ ರೀತಿ ನಿಮ್ಮನ್ನು ಕರೆಯಬೇಕಿತ್ತು ಸಿಎಂ? ಬೆಂಗಳೂರಿನಿಂದ ಮೈಸೂರಿಗೆ ಬರಲು, ಮೈಸೂರಿನಿಂದ ತಾಲ್ಲೂಕು ಕೇಂದ್ರಕ್ಕೆ ಹೋಗಲು ಹೆಲಿಕಾಪ್ಟರ್ ಬಳಕೆ ಮಾಡುತ್ತಿರಿ. ಇಂಡಿಗೆ ಹೋಗಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಹೋಗಬಹುದಿತ್ತಲ್ಲ ಎಂದು ಪ್ರಶ್ನೆ ಮಾಡಿದರು.
ಇನ್ನು ಬಿ.ಎಸ್.ಯಡಿಯೂರಪ್ಪ ಅವರ ಸತತ ಪ್ರಯತ್ನ, ಸಂಸದ ರಾಘವೇಂದ್ರ ಅವರ ಪರಿಶ್ರಮದಿಂದ ಸೇತುವೆ ಆಗಿದೆ. ಜನರ ಖುಷಿ ನೋಡಲು ಸಿಎಂ ಅಲ್ಲಿಗೆ ಹೋಗಬೇಕಿತ್ತು. ಬೀಗರ ಊಟಕ್ಕೆ ಬರ್ತಿರಲ್ಲ, ಸೇತುವೆ ಉದ್ಘಾಟನೆಗೆ ಯಾಕೆ ಹೋಗಲಿಲ್ಲ? ಸಿಎಂ ಅವರೇ ನೀವು ಯಾವ ಶಿಷ್ಟಾಚಾರ ಪಾಲಿಸುತ್ತಿದ್ದಿರಿ? ಸಚಿವ ಮಹದೇವಪ್ಪಗೆ ಶಿಷ್ಟಾಚಾರದ ಬಗ್ಗೆ ಮಾತಾಡುವ ಕನಿಷ್ಟ ಸೌಜನ್ಯವೂ ಇಲ್ಲ ಎಂದರು.
ಆಷಾಢ ಶುಕ್ರವಾರಕ್ಕೆ ಬೆಟ್ಟಕ್ಕೆ ಬಂದ ಸಚಿವ ಮಹದೇವಪ್ಪ ಮಂಗಳಾರತಿ ಕೊಟ್ಟರೆ ಮಂಗಳರಾತಿ ತೆಗೆದುಕೊಳ್ಳುವುದಿಲ್ಲ. ನಂಬಿಕೆ ಇಲ್ಲ ಅಂದರೆ ನೀವು ಯಾಕೆ ದೇವಸ್ಥಾನಕ್ಕೆ ಬರ್ತಿರಾ? ಶಾಸಕ ತನ್ವೀರ್ ಸೇಠ್ ಬೆಟ್ಟಕ್ಕೆ ಬಂದರೆ ಪೂಜೆ ಮಾಡುತ್ತಾರೆ, ಕುಂಕುಮ ಹಚ್ಚುತ್ತಾರೆ. ನೀವು ಮಾತ್ರ ಹಂಗೆ ಹೋಗ್ತಿರಿ? ಈ ಸಂಪತ್ತಿಗೆ ಬೆಟ್ಟಕ್ಕೆ ಯಾಕೆ ಬರ್ತಿರಿ?
ಸಿಗಂಧೂರು ಸೇತುವೆ ಡಿಪಿಆರ್ ಮಾಡಿಸಿದ್ದು ನಾನೇ ಎಂದು ಮಹದೇವಪ್ಪ ಹೇಳಿದ್ದಾರೆ.
ಯಾರೋ ಗೊತ್ತಿಲ್ಲದವರಿಗೆ ಈ ಕಥೆ ಹೇಳಿ ಮಹದೇವಪ್ಪ ಅವರೇ. ಡಿಪಿಆರ್ ಕೂಡ ಮಾಡಿಸೋದು ಕೇಂದ್ರ ಸರ್ಕಾರ ಅನ್ನೋದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಮೈಸೂರಿಗೆ ಬಂದಾಗ ಮಹದೇವಪ್ಪ ಮೈಸೂರಿಗೆ ಬರುತ್ತಾರೆ. ಅಮೇಲೆ ಕೈಗೆ ಸಿಗಲ್ಲ. ಮೈಸೂರಿನಲ್ಲಿ ಎಷ್ಟು ಕೆಡಿಪಿ ಸಭೆ ಮಾಡಿದ್ದಿರಾ ಹೇಳಿ? ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ ಅವರಿಗೆ ಪೊಲೀಸ್ ಗೌರವ ಕೊಡುವ ಸೌಜನ್ಯವೂ ಸಿಎಂಗೆ ಹಾಗೂ ಮಹದೇವಪ್ಪ ಇಲ್ಲ. ಕೆ.ಬಿ.ಗಣಪತಿಗೆ ಪೊಲೀಸ್ ಗೌರವ ಯಾಕೆ ಕೊಡಲಿಲ್ಲ? 50 ವರ್ಷ ನಿರಂತರವಾಗಿ ಪತ್ರಿಕೋದ್ಯಮ ಮಾಡಿದ ಕೆ.ಬಿ.ಗಣಪತಿ ಅವರಿಗೆ ಪೊಲೀಸ್ ಗೌರವ ಕೊಡಬೇಕಿತ್ತು ತಾನೇ? ಹಿರಿಯ ಪತ್ರಕರ್ತರಾದ ರಾಜಶೇಖರ ಕೋಟಿ, ದಲಿತ ಹೋರಾಟದ ಮುಖಂಡ ನಿಧನರಾದಾಗ ಪೊಲೀಸ್ ಗೌರವ ಕೊಡಲಾಗಿತ್ತು. ಈಗ ಕೆ.ಬಿ.ಗಣಪತಿ ಅವರಿಗೆ ಯಾಕೆ ಕೊಡಲಿಲ್ಲ ಎಂದು ಮಹದೇವಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.





