ಮೈಸೂರು: ಸರ್ಕಾರಿ ಬಸ್ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕಕ್ಕೆ ಸಿಲುಕಿ ಹೊರಬಂದು ಅಸಹಾಯಕರಾಗಿ ನಿಂತಿದ್ದ ಚಾಮುಂಡಿ ಭಕ್ತರ ನೆರವಿಗೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಬಿಂದುಮಣಿರವರು ಧಾವಿಸಿ ಸಾರ್ವಜನಿಕ ಕಳಕಳಿ ಮೆರೆದಿದ್ದಾರೆ. ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಆತಂಕ ದೂರವಾಗಿದ್ದು, ಬಿಂದುಮಣಿ ಅವರ ಸರಳತೆಗೆ ಚಾಮುಂಡಿ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದು ನಾಡದೇವತೆ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಎಂದಿನಂತೆ ಚಾಮುಂಡಿ ಬೆಟ್ಟಕ್ಕೆ ತೆರಳಲು ಭಕ್ತರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಉಚಿತ ಸಾರಿಗೆ ಬಸ್ ಹತ್ತಿ ಬೆಟ್ಟಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಮಾರ್ಗಮಧ್ಯೆ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕಕ್ಕೆ ಒಳಗಾಗಿದ್ದರು. ಇದೇ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಬಿಂದುಮಣಿ ರವರು ತಮ್ಮ ಅಧಿಕೃತ ವಾಹನದಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳುತ್ತಿದ್ದಾಗ ಆತಂಕದಲ್ಲಿ ಸಿಲುಕಿದ್ದ ಪ್ರಯಾಣಿಕರ ಪರಿಸ್ಥಿತಿಗೆ ಸ್ಪಂದಿಸಿದ್ದಾರೆ.
ತಮ್ಮ ವಾಹನದಿಂದ ಇಳಿದು ಪ್ರಯಾಣಿಕರಿಗೆ ಧೈರ್ಯತುಂಬಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಪ್ರಯಾಣಿಕರಿಗೆ ಬೆಟ್ಟಕ್ಕೆ ತೆರಳಲು ಅನುವು ಮಾಡಿಕೊಟ್ಟಿದ್ದಾರೆ. ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿ ತಿಳಿದು ನಂತರ ಸುಸ್ಥಿತಿಗೆ ತಲುಪಿದ್ದನ್ನ ಖಚಿತಪಡಿಸಿಕೊಂಡು ಪ್ರಯಾಣಿಕರಿಗೆ ತೆರಳಲು ಅನುಕೂಲ ಮಾಡಿಕೊಟ್ಟಿದ್ದಾರೆ. ಡಿಸಿಪಿ ಬಿಂದುಮಣಿ ಅವರ ಸರಳತೆ ಹಾಗೂ ಸಮಯಪ್ರಜ್ಞೆ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಗಮನ ಹರಿಸಿದ ಪೊಲೀಸ್ ಅಧಿಕಾರಿಯ ಬದ್ಧತೆ ಸಾರ್ವಜನಿಕ ಕಳಕಳಿಗೆ ಒಂದು ಮಾದರಿಯಾಗಿದೆ.





