ಮೈಸೂರು: ಕರ್ತವ್ಯಕ್ಕೆ ಹಾಜರಾದ ಭದ್ರತಾ ಸಿಬ್ಬಂದಿ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಮೈಸೂರು ಪ್ರಾಚ್ಯ ವಿದ್ಯಾ ಸಂಶೋಧನಾಲಯದ ಬಳಿ ನಡೆದಿದೆ.
ಸಂಜಯ್ ಎಂಬುವರೇ ಸಾವನ್ನಪ್ಪಿದ ಭದ್ರತಾ ಸಿಬ್ಬಂದಿಯಾಗಿದ್ದು, ಅನಾರೋಗ್ಯವಿದ್ದರೂ ಕೆಲಸಕ್ಕೆ ಹಾಜರಾದ ಸಂಜಯ್ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿ: ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ನಿಧನ
ವಿಶ್ವವಿದ್ಯಾನಿಲಯದಲ್ಲಿ ಈ ಹಿಂದಿನ ಗುತ್ತಿಗೆದಾರನಂತೆ ಭದ್ರತಾ ಕಾರ್ಮಿಕರ ಹಾಲಿ ಗುತ್ತಿಗೆ ಪಡೆದಿರುವ SRR ಎಂಬ ಬೆಂಗಳೂರು ಮೂಲದ ಏಜೆನ್ಸಿಯು ಕಳೆದ ಹತ್ತು ದಿನಗಳಿಂದ ವಾರದ ರಜೆ ನೀಡದೆ ಸಿಬ್ಬಂದಿಗಳಿಂದ ಕೆಲಸ ಮಾಡಿಸಿಕೊಂಡು ಬಂದಿರುತ್ತಾರೆ. ಈ ವಿಚಾರವಾಗಿ AIUTUC ವತಿಯಿಂದ ಆರು ದಿನ ಕೆಲಸ ಮಾಡುವ ಕಾರ್ಮಿಕರಿಗೆ ಒಂದು ದಿನ ವಾರದ ರಜೆಯಾಗಿ ನೀಡಲು ಒತ್ತಾಯಿಸಿದ್ದಾರೆ. ಆದರೆ ಗುತ್ತಿಗೆದಾರರು ಭದ್ರತಾ ಕಾರ್ಮಿಕರಿಗೆ ರಜೆಗಳು ಇರುವುದಿಲ್ಲ ಎಲ್ಲಾ ಸಮಯದಲ್ಲಿಯೂ ಕೆಲಸ ಮಾಡಬೇಕಾಗುತ್ತದೆ ಎಂಬ ದುರಹಂಕಾರದ ಮಾತುಗಳನ್ನು ಆಡಿದ್ದಾರೆ. ಈ ವಿಷಯದ ಕುರಿತು ನಿನ್ನೆ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರ್ಮಿಕರನ್ನು ವಜಾಗೊಳಿಸುವುದಾಗಿ ಏಜೆನ್ಸಿ ಅಧಿಕೃತ ಪತ್ರ ನೀಡಿದೆ ಮತ್ತು ಕೆಲಸ ನಿರಾಕರಣೆ ಮಾಡುವಂತೆ ಆದೇಶಿಸಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಸಂಜಯ್ ವಾರದ ರಜೆ ಕೇಳಿದ್ದಾರೆ. ಇದಕ್ಕೆ ಒಪ್ಪದ ಮೇಲ್ವಿಚಾರಕರು ಕೆಲಸ ಬೇಕಾದರೆ ಕೆಲಸ ಮಾಡು ಇಲ್ಲದಿದ್ದರೆ ಮನೆಗೆ ಹೋಗು, ನಾಳೆಯಿಂದ ಬರಬೇಡ ಎಂದು ಹೆದರಿಸಿದ್ದಾನೆ. ಅನಿವಾರ್ಯವಾಗಿ ಅದೇ ಸ್ಥಿತಿಯಲ್ಲಿ ಸಂಜಯ್ ತನ್ನ ಕೆಲಸದ ಸ್ಥಳಕ್ಕೆ ಹೋಗಿದ್ದಾರೆ. ಅನಾರೋಗ್ಯದಲ್ಲೂ ಕೆಲಸಕ್ಕೆ ಬಂದ ಸಂಜಯ್ ಪ್ರಾಚ್ಯವಿದ್ಯಾ ಸಂಶೋಧನಾಲಯ ಮೆಟ್ಟಿಲುಗಳ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಸಾವಿಗೆ ಯಾರನ್ನು ಹೊಣೆ ಮಾಡಬೇಕು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.





