ಮೈಸೂರು : ನಗರದ ಹೃದಯ ಭಾಗವಾದ ಸಿದ್ದಾರ್ಥ ನಗರದ ಸುರೇಶ್ ಎಂಬುವವರ ಮನೆಗೆ ಏಕಾಏಕಿ ನುಗ್ಗಿದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಿಂದ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಸುರೇಶ್ ಎಂಬುವವರ ಮನೆಗೆ ಏಕಾಏಕಿ ಚಿರತೆ ಪ್ರವೇಶಿಸಿದೆ, ಆ ವೇಳೆ ಮನೆಯಲ್ಲಿ ಸುರೇಶ್ ಅವರ ಪತ್ನಿ ಸುಜಾತಾ ಮತ್ತು ತಾಯಿ ಶೈಲಜಾ ಇದ್ದರು. ಚಿರತೆ ಏಕಾಏಕಿ ಮನೆಗೆ ನುಗ್ಗಿ ವೃದ್ಧೆ ಶೈಲಜಾ ಮಲಗಿದ್ದ ಕೊಠಡಿಯೊಳಗೆ ಪ್ರವೇಶಿಸಿತು. ಸಮಯಪ್ರಜ್ಞೆಯಿಂದ ಸುಜಾತಾ ಅವರು ತಮ್ಮ ಅತ್ತೆ ಶೈಲಜಾ ಅವರನ್ನು ಧೈರ್ಯದಿಂದ ರಕ್ಷಿಸಿದರು.
ಮನೆಯಲ್ಲಿ ಚಿರತೆ ಅಡಗಿರುವುದು ಗೊತ್ತಾದ ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತ್ವರಿತವಾಗಿ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಬಂಧಿಸಲಾಗಿದೆ.
ಸುಜಾತಾ ಅವರ ಸಮಯಪ್ರಜ್ಞೆಯಿಂದ ಅಜ್ಜಿ ಶೈಲಜಾ ಅವರ ಜೀವ ಉಳಿಸಿದ್ದು, ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.





