ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ ನಡೆದಿದೆ.
ಲಷ್ಕರ್ ಮೊಹಲ್ಲಾ ನಿವಾಸಿ, ಆಟೋ ಚಾಲಕ ಅರ್ಜುನ್ ಎಂಬಾತನೇ ಸ್ನೇಹಿತರಾದ ಗಿರಿದರ್ಶಿನಿ ಬಡಾವಣೆ ನಿವಾಸಿ ದರ್ಶನ್ ಹಾಗೂ ನಿತಿನ್ ಎಂಬವರಿಂದ ಹಲ್ಲೆಗೊಳಗಾದವನು. ಅರ್ಜುನ್‌ಗೆ ದರ್ಶನ್ ಹಾಗೂ ನಿತಿನ್ ಕೆಲ ದಿನಗಳ ಹಿಂದಷ್ಟೇ ಪರಿಚಿತರಾಗಿರುತ್ತಾರೆ. ಡಿ.೬ ರಂದು ಅರ್ಜುನ್ ಹಾಗೂ ಸ್ನೇಹಿತರು ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಕರೆ ಮಾಡಿದ ದರ್ಶನ್ ನನಗೆ ಹಣ ಬೇಕು ಫೋನ್ ಪೇ ಮಾಡು ಎಂದು ಹೇಳಿದ್ದಾನೆ. ಆದರೆ, ನನ್ನ ಬಳಿ ಹಣವಿಲ್ಲ ಎಂದು ಅರ್ಜುನ್ ತಿಳಿಸಿದ್ದಾನೆ. ಇದರಿಂದ ಕೋಪಗೊಂಡ ಆತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ನಡುವೆ ಅರ್ಜುನ್ ಪ್ರವಾಸ ಮುಗಿಸಿ ಡಿ.೭ ರಂದು ಮೈಸೂರಿಗೆ ವಾಪಸ್ಸಾಗಿದ್ದಾನೆ.
ಇದನ್ನು ಓದಿ: ಮೂರು ತಿಂಗಳಲ್ಲಿ ಪಿಎಸ್‌ಐ ಖಾಲಿ ಹುದ್ದೆ ಭರ್ತಿ : ಗೃಹ ಸಚಿವ ಪರಮೇಶ್ವರ್
ಅಂದು ರಾತ್ರಿ ಕರೆ ಮಾಡಿದ ದರ್ಶನ್ ಸಿದ್ದಾರ್ಥ ಬಡಾವಣೆಗೆ ಬರುವಂತೆ ತಿಳಿಸಿದ್ದಾನೆ. ಹೀಗಾಗಿ ಅರ್ಜುನ್ ಹಾಗೂ ಸ್ನೇಹಿತರಾದ ರವಿ, ಸತೀಶ್ ಹಾಗೂ ಚಂದನ್ ಆಟೋ ಮೂಲಕ ಅಲ್ಲಿಗೆ ತೆರಳಿದ್ದಾರೆ.
ಈ ವೇಳೆ ಅಲ್ಲಿಗೆ ಬಂದ ದರ್ಶನ್ ಹಣದ ವಿಚಾರವಾಗಿ ಜಗಳ ಆರಂಭಿಸಿದ್ದಾನೆ. ನಂತರ ತನ್ನೊಡನೆ ತಂದಿದ್ದ ಚಾಕುವಿನಿಂದ ಅರ್ಜುನ್‌ಗೆ ಇರಿದು ಪರಾರಿಯಾಗಿದ್ದಾನೆ. ಗಾಯಗೊಂಡಿದ್ದ ಆತನನ್ನು ಸ್ಥಳದಲ್ಲಿದ್ದ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





