Mysore
23
overcast clouds
Light
Dark

ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ಇಂದು ಅರಮನೆಗೆ ಆಗಮಿಸಲಿರುವ ಗಜಪಡೆಯ 2ನೇ ತಂಡ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಇಂದು ಅರಮನೆಗೆ ಗಜಪಡೆಯ 2ನೇ ತಂಡ ಆಗಮಿಸಲಿವೆ.

ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗಲು ಇಂದು ಅರಮನೆಗೆ 2ನೇ ತಂಡದ ಗಜಪಡೆ ಮೈಸೂರು ಅರಮನೆಗೆ ಆಗಮಿಸಲಿದ್ದು, ಇದಕ್ಕಾಗಿ ಅರಮನೆ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಅರಮನೆಯಲ್ಲಿ ಸಂಜೆ ಐದು ಗಂಟೆಗೆ ಮಹೇಂದ್ರ ನೇತೃತ್ವದ ಐದು ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತಿಸಲಾಗುತ್ತದೆ.

ಮತ್ತಿಗೋಡು ಆನೆ ಶಿಬಿರದಿಂದ ಮಹೇಂದ್ರ, ದುಬಾರೆ ಶಿಬಿರದಿಂದ ಪ್ರಶಾಂತ, ಸುಗ್ರೀವ, ರಾಮಂಪುರ ಶಿಬಿರದಿಂದ ಲಕ್ಷ್ಮಿ ಹಾಗೂ ಹಿರಣ್ಯ ಆನೆಗಳು ಇಂದು ಅರಮನೆಗೆ ಆಗಮಿಸಲಿವೆ.

ಈಗಾಗಲೇ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಮೊದಲ ತಂಡದ ಭೀಮ, ಧನಂಜಯ, ಗೋಪಿ, ವರಲಕ್ಷ್ಮಿ, ಲಕ್ಷ್ಮಿ, ಕಂಜನ್‌, ರೋಹಿತ್‌ ಹಾಗೂ ಏಕಲವ್ಯ ಆನೆಗಳು ಅರಮನೆಯಲ್ಲಿ ಬೀಡುಬಿಟ್ಟಿದ್ದು, ನಗರದ ವಾತಾವರಣಕ್ಕೆ ಹೊಂದಿಕೊಂಡಿವೆ.

ದಸರಾ ಗಜಪಡೆಗೆ ದಿನನಿತ್ಯ ತಾಲೀಮು ನಡೆಸಲಾಗುತ್ತಿದ್ದು, ಕ್ಯಾಪ್ಟನ್‌ ಅಭಿಮನ್ಯು ಅಂಡ್‌ ಟೀಮ್‌ಗೆ ನಿತ್ಯ ಅರಮನೆಯಿಂದ ಬನ್ನಿಮಂಟಪದವರೆಗೆ ನಡಿಗೆ ಹಾಗೂ ಭಾರ ಹೊರುವ ತಾಲೀಮು ನಡೆಸಲಾಗುತ್ತಿದೆ.