ಮೈಸೂರು: ಇಲ್ಲಿನ ಗಂಗೋತ್ರಿ ಲೇಔಟ್ ಬಳಿಯ ಮಾರುತಿ ಟೆಂಪಲ್ ರಸ್ತೆಯಲ್ಲಿ ಬೀದಿ ಹಸು ಹಾಗೂ ಕುದುರೆಗಳ ಕಾಟ ಹೆಚ್ಚಾಗಿದ್ದು, ವಾಹನ ಸವಾರರು ಭಯದಲ್ಲಿ ಸಂಚಾರ ಮಾಡುವ ಪರಿಸ್ಥಿತಿ ಎದುರಾಗಿದೆ.
ರಸ್ತೆಯಲ್ಲಿ ಈಗಾಗಲೇ ಹಲವಾರು ಬಾರಿ ಅಪಘಾತಗಳು ಸಂಭವಿಸಿದ್ದು, ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದರು ಯಾವುದೇ ಕ್ರಮವಹಿಸುತ್ತಿಲ್ಲ ಎಂದು ಸ್ಥಳೀಯರು ಪಾಲಿಕೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿ ನಿತ್ಯ ಈ ರಸ್ತೆಯ ಮಧ್ಯಭಾಗದಲ್ಲಿ ಹಸುಗಳು ಹಾಗೂ ಕುದುರೆಗಳು ರಸ್ತೆ ತುಂಬಾ ಓಡಾಡುತ್ತಿದ್ದು, ಕೆಲವು ವೇಳೆ ವಾಹನಗಳಿಗೆ ಅಡ್ಡಲಾಗಿ ದಿಢೀರ್ ನುಗ್ಗುವುದರಿಂದ ಅಪಘಾತಗಳು ಸಂಭವಿಸುತ್ತಿದೆ.
ಈ ಬಗ್ಗೆ ಆಂದೋಲನದೊಂದಿಗೆ ಮಾಹಿತಿ ಹಂಚಿಕೊಂಡ ಗಂಗೋತ್ರಿ ಲೇಔಟ್‌ನ ನಿವಾಸಿ ನಿವೃತ್ತ ವಿಜ್ಞಾನಿ ಆನಂದ್ ಅವರು, ಈ ಮುಖ್ಯ ರಸ್ತೆಯಲ್ಲಿ ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಕಾರು, ದ್ವಿಚಕ್ರ ವಾಹನ ಸವಾರರು ಸಂಚರಿಸುತ್ತಾರೆ. ರಸ್ತೆಯಲ್ಲಿ ಹಸುಗಳು, ಕುದುರೆಗಳು ಏಕಾಏಕಿ ನುಗ್ಗುವುದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಈ ಬಗ್ಗೆ ಪಾಲಿಕೆಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಪಾಲಿಕೆ ವಿರುದ್ಧ ಕಿಡಿಕಾರಿದರು.





