ಮೈಸೂರು: ಆಷಾಢ ಮಾಸದ ಹಿನ್ನೆಲೆಯಲ್ಲಿ ಇಂದು ನಾಡ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭೇಟಿ ನೀಡಿ ತಾಯಿಯ ದರ್ಶನ ಪಡೆದರು.
ಆಷಾಡ ಮಾಸದ ದರ್ಶನದಲ್ಲಿ ಅವ್ಯವಸ್ಥೆ ಎಂಬ ವಿಚಾರ ಕೇಳಿ ಬಂದ ಹಿನ್ನೆಲೆಯಲ್ಲಿ ಖುದ್ದು ಬೆಟ್ಟಕ್ಕೆ ಭೇಟಿ ನೀಡಿದ ಸಂಸದ ಯದುವೀರ್ ಒಡೆಯರ್ ಅವರು, ಬೆಟ್ಟದಲ್ಲಿ ಕಲ್ಪಿಸಿರುವ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು. ಪ್ರಾಧಿಕಾರದ ಕಾರ್ಯದರ್ಶಿ ರೂಪರೊಡಗೂಡಿ 2000 ಟಿಕೆಟ್, 300ರೂ ಟಿಕೆಟ್ ಹಾಗೂ ಸಾಮಾನ್ಯ ದರ್ಶನ ಭಾಗದಲ್ಲಿ ವೀಕ್ಷಣೆ ನಡೆಸಿ, ಅವ್ಯವಸ್ಥೆ ಸರಿಪಡಿಸುವಂತೆ ಸೂಚನೆ ನೀಡಿದರು.
ಇದೇ ವೇಳೆ ಮಾತನಾಡಿದ ಸಂಸದರು, ಬೆಟ್ಟದಲ್ಲಿ ಭಕ್ತಾಧಿಗಳಿಗೆ ಅವ್ಯವಸ್ಥೆ ಆಗಿದೆ ಎಂದು ದೂರು ಕೇಳಿ ಬಂದಿತ್ತು. ಅದರ ಪ್ರಯುಕ್ತ ಇಂದು ನಾನು ಒಬ್ಬ ಜನಪ್ರತಿನಿಧಿಯಾಗಿ ಭೇಟಿ ಮಾಡಿದ್ದೇನೆ. ಎಲ್ಲವನ್ನು ವೀಕ್ಷಣೆ ಮಾಡಿದ್ದೇನೆ. ಅಧಿಕಾರಿಗಳಿಗೂ ಸೂಚನೆ ನೋಡಿದ್ದೇನೆ. ದರ್ಶನ ಸಂದರ್ಭದಲ್ಲಿ ಸರಿಯಾಗಿ ವ್ಯವಸ್ಥೆ ಮಾಡಿಲ್ಲ. ಧರ್ಮ ದರ್ಶನ, ಟಿಕೆಟ್ ಪಡೆದು ಹೋಗುವವರು ಎಲ್ಲರಿಗೂ ಒಂದು ಕಡೆ ಬಂದು ಸೇರಿ ಸಾಕಷ್ಟು ಗೊಂದಲ ಉಂಟಾಗುತ್ತಿದೆ ಮತ್ತು ಪ್ರಸಾದ ವಿತರಣೆಯಲ್ಲೂ ಸರಿಯಾಗಿ ವಿತರಣೆ ಮಾಡುತ್ತಿಲ್ಲ ಎಂಬ ದೂರು ಕೇಳಿ ಬಂದಿತ್ತು. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಮುಂದೆ ಇಂತಹ ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು.
ಇನ್ನು 2000 ಟಿಕೆಟ್‌ನಿಂದ ಭಕ್ತರಿಗೆ ತೊಂದರೆ ಆಗುತ್ತದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಸರ್ಕಾರ ಇದನ್ನು ಮತ್ತೊಮ್ಮೆ ಪರಿಶೀಲಿಸಬೇಕು. 2000 ತುಂಬಾ ದುಬಾರಿಯಾಯಿತು ಎಂದು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದರು.
ಇನ್ನು ಚಾಮುಂಡಿಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಸ್ತ್ರ ಸಂಹಿತೆ ಪರವಾಗಿ ನಾನು ಯಾವಾಗಲು ಇದ್ದೇನೆ. ಧಾರ್ಮಿಕ ಕ್ಷೇತ್ರಗಳಿಗೆ ಬಂದಾಗ ಜನರು ಧಾರ್ಮಿಕ ಭಾವನೆಯಿಂದಲೇ ಬರಬೇಕು. ಅದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಚಾಮುಂಡಿ ಬೆಟ್ಟದಲ್ಲೂ ವಸ್ತ್ರ ಸಂಹಿತೆ ಜಾರಿಯಾಗಬೇಕು. ಇದರಿಂದ ಬರುವ ಭಕ್ತರಿಗೂ ಸಮಸ್ಯೆ ಆಗಬಾರದು. ತಿರುಪತಿ ಮಾದರಿ ಚಾಮುಂಡಿ ಬೆಟ್ಟದಲ್ಲೂ ಮೊಬೈಲ್ ನಿರ್ಬಂಧ ಮಾಡಬೇಕು. ಇತ್ತೀಚೆಗೆ ಕೆಲವರು ಗೊತ್ತಿದ್ದೋ ಗೊತ್ತಿಲ್ಲದೆಯೋ ದೇವಿಯ ಮೂಲ ವಿಗ್ರಹದ ವಿಡಿಯೋ ಮಾಡುತ್ತಿದ್ದಾರೆ. ಇದು ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುತ್ತದೆ. ಹಾಗಾಗಿ ಈ ನಿಟ್ಟಿನಲ್ಲಿ ಸೂಕ್ತ ಕಾನೂನನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.





