ಮೈಸೂರು: ಸಾಧನಾ ಸಮಾವೇಶದ ಹೆಸರಿನಲ್ಲಿ ಕಾಂಗ್ರೆಸ್ ಸಮಾವೇಶ ಮಾಡಿದ್ದಾರೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಧನಾ ಸಮಾವೇಶ ಹೆಸರಲ್ಲಿ ಕಾಂಗ್ರೆಸ್ ಸಮಾವೇಶ ಮಾಡಿದ್ದಾರೆ. ನಮಗೆ ಕೊಟ್ಟ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದೆ. ಆಹ್ವಾನ ಪತ್ರಿಕೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಹಾಕಿದ್ದಾರೆ. ಆದರೆ ಕೇಂದ್ರ ಸರ್ಕಾರದ ಸಚಿವರ ಹೆಸರೇ ಇಲ್ಲಾ. ಆಹ್ವಾನ ಪತ್ರಿಕೆಯಲ್ಲಿ ಎಚ್.ಡಿ.ದೇವೇಗೌಡರ ಹೆಸರು ಹಾಕಬಹುದಿತ್ತು. ಆಹ್ವಾನ ಪತ್ರಿಕೆಯಲ್ಲಿ ಕೇಂದ್ರ ಸಚಿವರ ಹೆಸರು ಹಾಕಿಲ್ಲ. ಇದು ಶಿಷ್ಟಾಚಾರ ಅಲ್ವಾ? ಎಂದು ಪ್ರಶ್ನೆ ಮಾಡಿದರು.
ಇನ್ನು ಇಡೀ ಸಮಾವೇಶದಲ್ಲಿ ಮೋದಿ ಅವರನ್ನ ಟೀಕೆ ಮಾಡುವ ಸಮಾವೇಶ ಆಗಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಅಭಿವೃದ್ಧಿ ಬಗ್ಗೆ ಮಾತಾಡಿಲ್ಲ. ಮೈಸೂರು ಜಿಲ್ಲೆಗೆ, ರಾಷ್ಟ್ರೀಯ ಹೆದ್ದಾರಿಗೆ ಅನುದಾನ ಕೊಟ್ಟಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಬೇಕಿತ್ತು. ಜಲಜೀವನ್ ಮಿಷನ್ ಸೇರಿದಂತೆ ಮತ್ತಿತರ ಯೋಜನೆಗಳನ್ನ ಕೇಂದ್ರ ಸರ್ಕಾರ ಕೊಟ್ಟಿಲ್ವ. ಅದನ್ನೆಲ್ಲ ಸ್ಮರಣೆ ಮಾಡದೆ ಮೋದಿ ಬಗ್ಗೆ ಟೀಕೆ ಮಾಡಿದ್ದಾರೆ. ಎಲ್ಲವನ್ನ ನಾವೇ ಮಾಡಿದ್ದೇವೆ ಎಂದು ಹೇಳಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ಇನ್ನು ಸಾಧನಾ ಸಮಾವೇಶ ಮಾಡಲು ಬಂದು ನಿಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದೇ ಸಾಧನೆಯಾ? ಡಿ.ಕೆ.ಶಿವಕುಮಾರ್ ಹೇಳಿ ಹೋಗಿದ್ದರೂ ಸೌಜನ್ಯಕ್ಕಾದರೂ ಅವರ ಹೆಸರನ್ನು ಹೇಳಬಹುದಿತ್ತಲ್ವಾ? ಯಾರೋ ಹಿಂದಿನಿಂದ ಬಂದು ಹೇಳಿದಾಗ ನೀವು ನಡೆದುಕೊಂಡ ರೀತಿ ಸರೀನಾ? ಸಾಧನಾ ಸಮಾವೇಶದ ನೆಪದಲ್ಲಿ ಬಲ ಪ್ರದರ್ಶನ ಮಾಡಿದ್ದೀರಾ. ಸಮಾವೇಶದಲ್ಲಿ ಪರಸ್ಪರ ವಿಶ್ವಾಸದ ಕೊರತೆಯನ್ನು ತೋರಿಸಿದ್ದಾರೆ. ಸಿದ್ದರಾಮಯ್ಯರ ಭಾಷಣ ಗಮನಿಸಿದರೆ ಅಧಿಕಾರ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಚುನಾವಣೆಗೆ ಹೋಗುವ ಹುನ್ನಾರ ನಡೆಸಿದ್ದಾರೆ ಎನಿಸುತ್ತಿದೆ. ತೆರಿಗೆದಾರರ ಹಣದಲ್ಲಿ ಸಮಾವೇಶ ಮಾಡಿ ಪೋಲು ಮಾಡಿದ್ದಾರೆ. ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.
ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮೇಲೆ ಬಿಜೆಪಿ ನಾಯಕರಿಗೆ ಹೆಚ್ಚು ಪ್ರೀತಿ ಬಂದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ನೋಡಿದ್ರೆ ನಿಜವಾಗಲೂ ಪಾಪ ಅನ್ಸುತ್ತೆ. ಸಮಾವೇಶದಲ್ಲಿ ಭಾಷಣ ಮಾಡಿ ಹೋದ ಮೇಲೆ ಸ್ವಾಗತ ಹೇಳಬಹುದಿತ್ತು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡಿಕೆ ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಅವರು ಸ್ವಾಗತ ಮಾಡಿಲ್ಲ, ವೇದಿಕೆಯ ಮೇಲೆ ಇಲ್ಲ ಅಂದಿದ್ರು ಮಾಡಬಹುದಿತ್ತು. ಆದ್ರೆ ಉಪಮುಖ್ಯಮಂತ್ರಿಗಳಿಗೆ ಸ್ವಾಗತ ಕೋರಿಲ್ಲ, ಅದನ್ನ ನೋಡಿದ್ರೆ ಪಾಪ ಅನ್ಸುತ್ತೆ. ಈ ಮೂಲಕ ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಆಗುತ್ತೆ ಎಂಬುದು ಕಾಣಿಸುತ್ತಿದೆ ಎಂದರು.
ಇನ್ನು ಮೈಸೂರು ಜಿಲ್ಲೆಗೆ ಕೇಂದ್ರ ಏನನ್ನೂ ಕೊಟ್ಟಿಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಮೊನ್ನೆ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದರು. ಇಂದು ಸವಾಲು ಸ್ವೀಕರಿಸಿದ ಶಾಸಕ ಟಿ.ಎಸ್.ಶ್ರೀವತ್ಸ ಅವರು, ಚರ್ಚೆಗೆ ಸಿದ್ಧ ಎಂದು ಹೇಳಿದ್ದಾರೆ.





