ಮೈಸೂರು: ಅಹಿಂದ ಚಳುವಳಿಯನ್ನು ಸಿದ್ದರಾಮಯ್ಯ ಅವರ ನಂತರ ಸತೀಶ್ ಜಾರಕಿಹೊಳಿ ಮುಂದುವರೆಸಲಿ ಎಂದು ಶಾಸಕ ನರೇಂದ್ರ ಸ್ವಾಮಿ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಹಿಂದ ಚಳುವಳಿಯ ಭಾಗ. ಕಾಂಗ್ರೆಸ್ ಸಿದ್ಧಾಂತವೇ ಅಹಿಂದ ಸಿದ್ಧಾಂತ. ಸಿದ್ದರಾಮಯ್ಯನವರ ನಂತರ ಚಳುವಳಿಯನ್ನ ಒಬ್ಬರು ಮುಂದುವರೆಸಬೇಕು ತಾನೇ. ಜಾರಕಿಹೊಳಿ ಸಿದ್ದರಾಮಯ್ಯ ಅವರ ಜೊತೆ ಸುದೀರ್ಘವಾಗಿ ಇದ್ದವರು. ಅವರೇ ಚಳುವಳಿ ಮುಂದುವರೆಸಲಿ ಎಂಬುದು ನಮ್ಮ ಮನವಿ. ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಅಹಿಂದ ಚಳುವಳಿಗೆ ಸಂಬಂಧಪಟ್ಟದ್ದು ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಇದನ್ನು ಓದಿ: ಅಹಿಂದ,ಶೋಷಿತ ವರ್ಗಗಳ ಶಕ್ತಿಯನ್ನು ಕಸಿಯುತ್ತಿರುವ ಕೇಂದ್ರ ಸರ್ಕಾರ: ರಣದೀಪ್‌ಸಿಂಗ್ ಸುರ್ಜೆವಾಲ
ಇನ್ನು ಮುಂದುವರಿದು ಮಾತನಾಡಿದ ಅವರು, ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಇಲ್ಲ ನಮ್ಮಲ್ಲಿ ಕೇವಲ ಶಾಂತಿ ಅಷ್ಟೇ. ಯಾರನ್ನ ಸಚಿವರಾಗಿ ಮಾಡಬೇಕು ಎಂಬುದೆಲ್ಲಾ ಹೈ ಕಮಾಂಡ್‌ಗೆ ಬಿಟ್ಟ ವಿಚಾರ. ನಾನೇನು ಸನ್ಯಾಸಿ ಅಲ್ಲ. ಪಕ್ಷ ಯಾವಾಗ ಜವಾಬ್ದಾರಿ ಕೊಡಬೇಕೋ ಆಗ ಕೊಡುತ್ತದೆ ಎಂದು ಹೇಳಿದರು.
ಇನ್ನು ಅಧಿಕಾರ ಹಂಚಿಕ ಒಪ್ಪಂದದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಸಾರ್ವಜನಿಕವಾಗಿ ಚರ್ಚೆಯಾಗುವ ವಿಚಾರ ಅಲ್ಲ. ಜ್ಞಾನ ಕಡಿಮೆ ಇರುವವರು ಅದನ್ನು ಮಾತನಾಡುತ್ತಾರೆ. ಕಾಂಗ್ರೆಸ್ ಶಾಸಕರಾಗಿರಲಿ ವಿರೋಧ ಪಕ್ಷದವರೇ ಆಗಿರಲಿ ಮಾಹಿತಿ ಕೊರತೆಯಿಂದ ಅದನ್ನೆಲ್ಲಾ ಮಾತನಾಡುತ್ತಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಾವೆಲ್ಲಾ ಉತ್ತಮವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.





