ಮೈಸೂರು: ಆಷಾಢ ಮಾಸದ ಎರಡನೇ ಶುಕ್ರವಾರವಾಗಿರುವ ಹಿನ್ನೆಲೆಯಲ್ಲಿಂದು ನಾಡದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಭೇಟಿ ನೀಡಿ ತಾಯಿಯ ದರ್ಶನ ಪಡೆದು ನಾಡಿಗೆ ಹಾಗೂ ರೈತರಿಗೆ ಒಳಿತಾಗುವಂತೆ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ದಿಶಾ ಸಭೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. ಕುಮಾರಸ್ವಾಮಿಗೆ ಒಳ್ಳೆದಾಗಲಿ ನನಗೆ ಮೈಸೂರಿನಲ್ಲಿ ಅಧಿಕಾರಿಗಳ ಸಭೆ ಇದೆ. ಹೀಗಾಗಿ ಅಲ್ಲಿಗೆ ಹೋಗಲು ಆಗಲ್ಲ. ಅವರು ಏನೇ ಯೋಜನೆ ತಂದರು ನಮ್ಮ ಬೆಂಬಲ ಇರುತ್ತದೆ. ಜಿಲ್ಲೆಗೆ , ರಾಜ್ಯಕ್ಕೆ ದೊಡ್ಡ ಮಂತ್ರಿ ಇದ್ದಾರೆ. ಜೋಶಿ, ಕುಮಾರಸ್ವಾಮಿ ಇಬ್ಬರು ಸೇರಿ ರಾಜ್ಯಕ್ಕೆ ಬರಬೇಕಾದ ಟ್ಯಾಕ್ಸ್ ಹಣ ಕೊಡಿಸಲಿ. ಅದನ್ನು ಬಿಟ್ಟು ಬರುವ ಎಂಪಿ ಹಣ ತಂದರೆ ಅದರಲ್ಲೇನು ವಿಶೇಷ ಇದೆ.? ಏನಾದ್ರೂ ವಿಶೇಷ ಅನುದಾನ ತಂದು ಅಭಿವೃದ್ದಿ ಮಾಡಲಿ ಎಂದು ಆಗ್ರಹಿಸಿದರು.
ಇನ್ನು ರಾಜ್ಯಕ್ಕೆ ರಣದೀಪ್ ಸಿಂಗ್ ಸುರ್ಜೇವಾಲ ಭೇಟಿಯಾಗಿ ಶಾಸಕರ ಜೊತೆ ಮಾತುಕತೆ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದು ಎರಡು ವರ್ಷ ಆಗಿದೆ. ಜನಪರವಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಹೆಚ್ಚಿನ ಕೆಲಸ ಮಾಡಲು ಜನರ ಅಭಿಪ್ರಾಯ ಹೇಗಿದೆ ಎಂದು ಕೇಳಲು ಬಂದಿದ್ದರು. ಜೊತೆಗೆ ಶಾಸಕರ ಅಭಿಪ್ರಾಯ ಕೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಡಿಕೆಶಿ ಒಗ್ಗಟ್ಟಾಗಿದ್ದಾರೆ. ಯಾರೇ ಏನು ಮಾಡಿದ್ರು ಅವರ ಒಗ್ಗಟ್ಟು ಹೀಗೆ ಇರುತ್ತದೆ. 5 ವರ್ಷ ಇಬ್ಬರು ಹೀಗೆ ಇರ್ತಾರೆ ಎಂದು ಹೇಳಿದರು.





