Mysore
16
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ರೈತರ ಸಂಜೀವಿನಿಯಾದ ಹಾಲು ಉತ್ಪಾದನಾ ಕ್ಷೇತ್ರ : ಶಾಸಕ ಜಿ.ಟಿ.ದೇವೇಗೌಡ 

ಮೈಸೂರು : ಪ್ರಸ್ತುತ ರೈತರು ಮಳೆಯಿಂದಾಗಿ ಬೆಳೆನಷ್ಟ, ಮಳೆ ಬಾರದೇ ಬೆಳೆ ನಷ್ಟ, ಬೆಳೆ ಬಂದರೂ ಬೆಲೆ ಸಿಗದೇ ನಷ್ಟ ಅನುಭವಿಸುವಂತಹ ಸನ್ನಿವೇಶದಲ್ಲಿ ರೈತರ ಜೀವ ಉಳಿಸುವ ಸಂಜೀವಿನಿ ಎಂದರೆ ಹಾಲು ಉತ್ಪಾದನೆಯ ಕ್ಷೇತ್ರ ಆಗಿದೆ ಎಂದು ಶಾಸಕ, ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಮತ್ತು ಭಾರತೀಯ ಡೇರಿ ಅಸೋಸಿಯೇಷನ್‌, ಕರ್ನಾಟಕ ರಾಜ್ಯ ಶಾಖೆ ಸಂಯುಕ್ತಾಶ್ರಯದಲ್ಲಿ ಕ್ಷೀರಕ್ರಾಂತಿಯ ಪಿತಾಮಹ ಡಾ.ವರ್ಗೀಸ್‌ ಕುರಿಯನ್‌ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ “ರಾಷ್ಟ್ರೀಯ ಹಾಲು ದಿನಾಚರಣೆ”ಯನ್ನು ಡಾ.ವರ್ಗೀಸ್‌ ಕುರಿಯನ್‌ ಪುತ್ಥಳಿಗೆ ಮಾಲಾರ್ಪಣೆ, ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದರು.

ವರ್ಗೀಸ್‌ ಕುರಿಯನ್‌ ಅವರಿಂದ ಹಾಲಿನ ಕ್ಷೇತ್ರ ಇಂದು ದೇಶದಾದ್ಯಂತ ಒಂದು ದೊಡ್ಡ ಉದ್ಯಮವಾಗಿ ಬೆಳೆಯಲು ಸಹಕಾರಿಯಾಯಿತು. ಅವರನ್ನು ಎಲ್ಲರೂ ಸದಾ ಸ್ಮರಿಸುವ ಕೆಲಸ ಮಾಡಬೇಕಿದೆ. ರಾಜ್ಯದಲ್ಲಿ ಎಂ.ಕೃಷ್ಣಪ್ಪ ಕೇಂದ್ರದಲ್ಲಿ ಕೃಷಿ ಮಂತ್ರಿಯಾಗಿದ್ದ ವೇಳೆ ಬನ್ನೇರುಘಟ್ಟದಲ್ಲಿ ಹಾಲೆಂಡ ನಿಂದ ತಳಿ ತಂದು ಕರ್ನಾಟಕಕ್ಕೆ ಪರಿಚಯಿಸಿದರು. ಕೆಎಂಎಫ್‌ ಸ್ಥಾಪನೆ ಮಾಡಿದ್ದು ಅವರ ಕೊಡುಗೆ ಯಾಗಿದೆ ಎಂದರು.

ದೇವೇಗೌಡರು ಪ್ರಧಾನಿಯಾಗಿ, ಎಚ್‌.ಡಿ.ರೇವಣ್ಣ ಕೆಎಂಎಫ್‌ ಅಧ್ಯಕ್ಷರಾಗಿದ್ದ ವೇಳೆ ಸ್ಪೇಪ್‌ ಯೋಜನೆ ಜಾರಿಗೆ ತಂದು, ಮಹಿಳಾ ಉತ್ಪಾದಕರನ್ನು ದೇಶದ ಪ್ರವಾಸ ಮಾಡುವಂತೆ ಮಾಡಿದರು. ಅವರಿಂದ ಹೆಚ್ಚು ಉತ್ಪನ್ನಗಳನ್ನು ಮಾಡಲು ಅನೂಕೂಲವಾಯಿತು. ಈ ಕಾರಣಕ್ಕಾಗಿಯೇ 167 ಉತ್ಪನ್ನಗಳ ಪ್ರಚಾರ ಮಾಡಿ ಮಾರಾಟ ಮಾಡುತ್ತಿದ್ದಾರೆ. ಯಡಿಯೂರಪ್ಪ 2.ರೂ. ಈಗ ಸಿದ್ದರಾಮಯ್ಯ 3.ರೂ ಹೆಚ್ಚಿಸಿ ಸರ್ಕಾರ ನೇರವಾಗಿ 5ರೂ. ನೀಡುತ್ತಿದೆ. ಮಕ್ಕಳಿಗೆ ಕ್ಷೀರಭಾಗ್ಯ ಜಾರಿಗೊಳಿಸುವ ಯೋಜನೆ ಮೂಲಕ ಡೇರಿಗಳ ಉಳಿವಿಗೆ ಅನೂಕೂಲ ಮಾಡಿಕೊಟ್ಟರು ಎಂದು ತಿಳಿಸಿದರು.

ಇದನ್ನು ಓದಿ: ರಾಜ್ಯ ಸರ್ಕಾರ ವಿಫಲ : ಸಂಸದ ಯದುವೀರ್‌ ಟೀಕೆ 

ಡೇರಿ ಪಶು ವೈದ್ಯರು ಪ್ರತಿ ಡೇರಿಗಳಿಗೆ ಭೇಟಿ ನೀಡಿ ಹುಲ್ಲಿನ ಬೀಜ, ಆರೋಗ್ಯ ತಪಾಸಣೆ ಮಾಡಿದ್ದರ ಫಲವಾಗಿ ಮೈಮುಲ್‌ ಬೆಳೆಯಲು ಸಹಕಾರಿಯಾಯಿತು. ಮಹಿಳೆಯರು ಸ್ವಾವಲಂಬಿಗಳಾಗಲು ಹೈನೋದ್ಯಮ ಸಹಕಾರಿಯಾಯಿತು. ಮಕ್ಕಳ ವಿದ್ಯಾಭ್ಯಾಸ, ಕೃಷಿ, ಆರೋಗ್ಯ ಹಾಗೂ ತುರ್ತು ವೆಚ್ಚದ ವೇಳೆ ಕುಟುಂಬ ಕಾಪಾಡಲು ಸಹಕಾರಿಯಾಗಿದೆ.

ಭವಿಷ್ಯದ ಪ್ರಜೆಗಳಾದ ಇಂದಿನ ಮಕ್ಕಳು ಪೌಷ್ಠಿಕತೆಯಿಂದ ಇರಲು ನಿಮ್ಮೆಲ್ಲರ ಕೊಡುಗೆಯಿದೆ. ವರ್ಗೀಸ್‌ ಅವರನ್ನು ಎಷ್ಟೇ ನೆನೆದರೂ ಸಾಲದು. ದೇಶದ ಅಭಿವೃದ್ಧಿಗೆ ಪೂರಕವಾಗಿ ನೀವೆಲ್ಲರೂ ಸೇವೆ ಸಲ್ಲಿಸುತ್ತಿದ್ದೀರಿ. ದೇಶವನ್ನು ಕಟ್ಟುವ ಶಕ್ತಿ ಇಂದು ಮಹಿಳೆಯರಿಗಿದೆ ಎಂಬುದನ್ನು ಇತ್ತೀಚಿನ ದಿನಗಳಲ್ಲಿ ಮನಗಾಣಬಹುದಾಗಿದೆ. ಹಿಂದೆ ಇದ್ದ ಅಧಿಕಾರಿಗಳು ಹಣ ಆಸೆ ಪಡದೇ ಪ್ರಾಮಾಣಿಕವಾಗಿ ಸೇವೆ ಮಾಡಿದ್ದಾರೆ. ಈಗ ಇರುವವರಲ್ಲಿ ಹಣ ಸಂಪಾದನೆ ಸೇವಾ ಮನೋಭಾವನೆ ಇಲ್ಲವಾಗಿದೆ. ಸತ್ಯವಾದ ಬದುಕು ನಿಮ್ಮೆಲ್ಲರನ್ನು ದಡ ಸೇರಿಸಲಿದೆ. ನಿತ್ಯ ನಿಮ್ಮ ಕರ್ತವ್ಯವನ್ನು ಸೂಪರ್‌ ವೈಸರ್‌ಗಳು ನಿರ್ವಹಿಸಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಐಡಿಎ ದಕ್ಷಿಣ ವಲಯ ಅಧ್ಯಕ್ಷ ಡಾ.ಸತೀಶ್‌ ಕುಲಕರ್ಣಿ ಮಾತನಾಡಿ, ಹಾಲು ಉತ್ಪಾದನೆಯಲ್ಲಿ 20 ವರ್ಷದಿಂದ ಪ್ರಪಂಚದ ಮೊದಲ‌ ಸ್ಥಾನದಲ್ಲಿ ನಾವಿದ್ದೇವೆ. ದೇಶದಲ್ಲಿ 239 ಮಿಲಿಯನ್ ಟನ್ 12 ಲಕ್ಷ ಕೋಟಿ ರೂ. ಆರ್ಥಿಕ ಆದಾಯ ಹೈನೋದ್ಯಮದಿಂದ ಬರುತ್ತಿದೆ.

ಯಾವ ದೇಶದಲ್ಲೂ ಇಂತಹ ಹಾಲಿನ ಉತ್ಪನ್ನ ಹೆಚ್ಚಳ ಆಗುತ್ತಿಲ್ಲ. ಈ ಬಗ್ಗೆ ಮಾರ್ಗದರ್ಶನ ನೀಡಿದವರು ಕುರಿಯನ್ ಆಗಿದ್ದಾರೆ. 17 ರಾಷ್ಟ್ರೀಯ ಸಂಸ್ಥೆ ಪ್ರಾರಂಭಿಸಿದ ಕೀರ್ತಿ ಅವರದ್ದು, ಅಂತಾರಾಷ್ಟ್ರೀಯ ಮಟ್ಟಕ್ಕೆ ಡೇರಿ ಉದ್ಯಮ ಕೊಂಡು ಹೋದರು. ಆಹಾರದಲ್ಲಿ ನೊಬೆಲ್ ಮಾದರಿಯ ಕ್ಷೀರ ಕ್ರಾಂತಿಯ ಪಿತಾಮಹ ಪ್ರಶಸ್ತಿ ಪಡೆದು, 18 ಗೌರವ ಡಾಕ್ಟರ್ ಪಡೆದ ಮಹನೀಯರನ್ನು ಸ್ಮರಿಸುವ ದಿನ ಇದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯದ ಉತ್ತಮ ಮಹಿಳಾ ಹಾಲು ಉತ್ಪಾದಕಿಯರಾದ ಶಿವಾನಿರಾಜಶೇಖರ್‌(ಧಾರವಾಡ), ಡಾ.ಜ್ಯೋತಿ ಉಮೇಶ್‌(ಮೈಸೂರು), ಮಂಜುಳಾ(ಚಿಕ್ಕಬಳ್ಳಾಪುರ) ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಚನ್ನೇಗೌಡ, ಬಿ.ಎಸ್‌.ಗಂಗಾಧರ್‌, ಎನ್‌ಡಿಡಿಬಿ ನಿರ್ದೇಶಕ ಡಾ.ಬೆಳವಾಡಿರನ್ನು ಸನ್ಮಾನಿಸಲಾಯಿತು. ಎಸ್‌ಎನ್‌ಎಫ್‌ ಅಂಶದ ಮೇಲೆ ಪಶು ಆಹಾರದ ಪರಿಣಾಮ, ಸಂತಾನೋತ್ಪತ್ತಿ ವಿಧಾನಗಳ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಮೈಮುಲ್ ಅಧ್ಯಕ್ಷ ಕೆ.ಈರೇಗೌಡ, ನಿರ್ದೆಶಕರಾದ ಎ.ಟಿ.ಸೋಮಶೇಖರ, ಕೆ.ಜಿ.ಮಹೇಶ್, ಕೆ.ಉಮಾಶಂಕರ್, ಸಿ.ಓಂ.ಪ್ರಕಾಶ್, ಪಿ.ಎಂ.ಪ್ರಸನ್ನ, ಆರ್.ಚೆಲುವರಾಜು, ಕೆ.ಎಸ್.ಕುಮಾರ್, ದ್ರಾಕ್ಷಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ.ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಎನ್.ಸದಾನಂದ, ಬಿ.ಗುರುಸ್ವಾಮಿ, ಬಿ.ಎ.ಪ್ರಕಾಶ್, ಎ.ಬಿ.ಮಲ್ಲಿಕಾ ರವಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Tags:
error: Content is protected !!