Mysore
26
light rain

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಸಮಾಜದಲ್ಲಿ ಪುರುಷ-ಮಹಿಳೆಯರು ಸಮಾನರು : ಶಾಸಕ ಜಿಟಿಡಿ

ಮೈಸೂರು : ಸಮಾಜದಲ್ಲಿ ಪುರುಷರು-ಮಹಿಳೆಯರು ಎನ್ನುವ ತಾರತಮ್ಯವಿಲ್ಲದೆ ಸಮಾನರಾಗಿದ್ದಾರೆ. ಮಹಿಳೆ ಇಂದು ದೇಶದ ಆರ್ಥಿಕ ವ್ಯವಸ್ಥೆ ಚೆನ್ನಾಗಿರಲು ಮೂಲ ಕಾರಣರಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡಿರುವುದರಿಂದ ಪುರುಷರಿಗಿಂತ ಮಹಿಳೆಯರು ಕಡಿಮೆಯೇನಿಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಮೈಸೂರು ತಾಲ್ಲೂಕಿನ ಜಯಪುರ ಗ್ರಾಮದ ಮರಮ್ಮ ಸಿದ್ದೇಗೌಡ ಫಂಕ್ಷನ್ ಹಾಲ್‌ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಸಾಮೂಹಿಕ ಶ್ರೀ ಅಷ್ಟಲಕ್ಷ್ಮೀ ಪೂಜಾಸಮಿತಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಸಾಮೂಹಿಕ ಶ್ರೀ ಅಷ್ಟಲಕ್ಷ್ಮೀ ಪೂಜೆ ಮತ್ತು ಧಾರ್ಮಿಕಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಮೊದಲೆಲ್ಲಾ ಕುಟುಂಬ ನಿರ್ವಹಣೆ ಹೊರುತ್ತಿದ್ದರು. ಮಳೆಗಾಲ,ಚಳಿಗಾಲ ಎನ್ನದೆ ತಾವೇ ಎಲ್ಲ ಕೆಲಸ ಮಾಡುತ್ತಿದ್ದರು. ನಲ್ಲಿ,ಬೋರ್‌ವೆಲ್‌ಗಳು ಇರಲಿಲ್ಲ. ದೂರದಲ್ಲಿ ಇದ್ದಬಾವಿಗಳಿಂದ ನೀರು ಹೊತ್ತು ತರುತ್ತಿದ್ದರು. ಮಳೆಗಾಲದಲ್ಲಿ ಬಿಡುವು ಇಲ್ಲದಿದ್ದಾಗ ತಾವೇ ಎಲ್ಲ ಕೆಲಸ ಮಾಡಿಕೊಳ್ಳುತ್ತಿದ್ದರು. ಹಿಂದಿನ ಕಾಲದಲ್ಲಿ ಏಳೆಂಟು ಮಕ್ಕಳನ್ನು ಹೆಡೆದು ಸಾಕುತ್ತಿದ್ದರು. ಅಮೇಲೆ ಆರತಿಗೊಬ್ಬ-ಕೀರ್ತಿಗೊಬ್ಬ ಎನ್ನುವಂತೆ ಎರಡು ಮಕ್ಕಳಿಗೆ ಬಂದರು. ಈಗ ಒಂದು ಮಗುವಿಗೆ ಬಂದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:-ದಲಿತರು ಬೌದ್ಧ ಧರ್ಮಕ್ಕೆ ಹೋದರೆ ಮತಾಂತರ ಅಲ್ಲ : ಸಚಿವ ಮಹದೇವಪ್ಪ

ಹೈನುಗಾರಿಕೆಯಿಂದ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಎರಡು ಹಸುಗಳನ್ನು ಖರೀದಿಸಿ ಸಾಕಿದರೆ ಬದುಕು ಸಾಗಿಸಬಹುದು. ಮಹಿಳೆಯರು ತಾವು ಸಂಪಾದನೆ ಮಾಡಿದ್ದನ್ನು ಕೂಡಿಡಬೇಕು. ಯಶಸ್ವಿನಿ ಯೋಜನೆಯಡಿ ವಿಮೆ ಮಾಡಿಸಬೇಕು. ಕೆಲವರು ಆಸ್ಪತ್ರೆಗೆ ಸೇರಿಸಿದ ಮೇಲೆ ನಮ್ಮತ್ರ ಹಣವಿಲ್ಲ,ಆಸ್ಪತ್ರೆಗೆ ಹೇಳಬೇಕು,ಹಣ ಕಟ್ಟಲು ದುಡ್ಡಿಲ್ಲ ಎನ್ನುತ್ತಾರೆ. ಅದರ ಬದಲಿಗೆ ಒಂದು ವಿಮೆ ಮಾಡಿಸಿದರೆ ಕುಟುಂಬದ ಆರೋಗ್ಯ ವೆಚ್ಚವನ್ನು ಭರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಇಂದು ಅದ್ಧೂರಿ ಮದುವೆ ಮಾಡದೆ ಸರಳವಾಗಿ ಮಾಡಬೇಕು. ನನ್ನ ಇಬ್ಬರು ಹೆಣ್ಣು ಮಕ್ಕಳು, ಮಗನಿಗೆ ತಿರುಪತಿಯಲ್ಲಿ ಮದುವೆ ಮಾಡಿಸಿದೆ. ನನ್ನ ತಮ್ಮನ ಮಗನ ಮದುವೆಯನ್ನು ಧರ್ಮಸ್ಥಳದಲ್ಲಿ ಮಾಡಿಸಿದೆ. ಇರುವ ಜಮೀನು ಮಾರಿ ಅದ್ಧೂರಿ ಮದುವೆ ಮಾಡದೆ ಜಮೀನು ಉಳಿಸಿಕೊಳ್ಳಬೇಕು. ಸಾಲ-ಸೋಲ ಮಾಡಿ ಮದುವೆ,ಮನೆ ಕಟ್ಟುತ್ತಾರೆ. ನಂತರ,ಇರುವ ಜಮೀನು ಮಾರಿ ಕೂಲಿಕೆಲಸಕ್ಕೆ ಹೋಗುವಂತಾಗಿದೆ ಎಂದು ಬೇಸರಿಸಿದರು.

ಮಕ್ಕಳಿಗೆ ಸಂಸ್ಕಾರ, ಒಳ್ಳೆಯ ವಿದ್ಯೆ,ಸುಸಂಸ್ಕೃತ ಬದುಕನ್ನು ಕಲಿಸಬೇಕು. ಸರ್ಕಾರಿ ಕೆಲಸವನ್ನು ಸದಾ ಅವಲಂಬಿಸಿದೆ ಸ್ವಯಂ ಉದ್ಯೋಗ ಕಂಡುಕೊಳ್ಳಬೇಕು. ಗುಡಿ ಕೈಗಾರಿಕೆಗಳನ್ನು ಆರಂಭಿಸಿ ಸ್ಥಳೀಯವಾಗಿ ಹಲವಾರು ವಸ್ತುಗಳನ್ನು ತಯಾರಿಸಿ ಮಾರುಕಟ್ಟೆ ಕಂಡುಕೊಳ್ಳಬೇಕು. ಇಂದು ಮಹಿಳೆಯರು ತಯಾರಿಸಿದ ಹಲವು ವಸ್ತುಗಳಿಗೆ ಬೇಡಿಕೆ ಬಂದಿದೆ. ಅದಕ್ಕೆ ತಕ್ಕಂತೆ ಮಹಿಳಾ ಸ್ವಯಂ ಸಂಘಗಳು ವಸ್ತುಗಳನ್ನು ತಯಾರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಚಾಮುಂಡೇಶ್ವರಿಕ್ಷೇತ್ರದಲ್ಲಿ ಕುಡಿಯುವ ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಉಂಡುವಾಡಿ ಮತ್ತು ಕಬಿನಿ ನದಿ ಮೂಲದಿಂದ ಹೊರವಲಯದ ಪ್ರದೇಶಗಳು,ಹಳ್ಳಿಗಳಿಗೆ ನೀರು ಕೊಡಲು ಕಾಮಗಾರಿ ನಡೆಯುತ್ತಿದೆ. ಮುಂದಿನ ಒಂದು ವರ್ಷದೊಳಗೆ ಚಾಮುಂಡೇಶ್ವರಿ ಕ್ಷೇತ್ರದ೨೦೦ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದೇ ಒಂದು ದೊಡ್ಡ ಆಸ್ತಿಯಾಗಲಿದೆ. ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಕೆಲವು ಹಾದಿ ತಪ್ಪಿದ ಮಕ್ಕಳ ಸಂಗಡ ಸೇರಿ ತಪ್ಪುದಾರಿಗೆ ಹೋಗುವುದನ್ನು ತಡೆಯಬೇಕು ಎಂದು ಕಿವಿಮಾತು ಹೇಳಿದರು.

Tags:
error: Content is protected !!