ಮೈಸೂರು: ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಕ್ರಮ ನಡೆದಿರುವುದನ್ನು ಸ್ವತಃ ಒಪ್ಪಿಕೊಂಡಿರುವ ಸಹಕಾರ ಸಚಿವ ರಾಜಣ್ಣಗೆ ಯಾವುದೇ ನೈತಿಕತೆ ಇಲ್ಲ ಎಂದು ಎಂಸಿಡಿಸಿಸಿ ಮಾಜಿ ಅಧ್ಯಕ್ಷ ಹಾಗು ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಎಂಸಿಡಿಸಿಸಿ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಅಕ್ರಮ ನಡೆದಿದೆ. ಇದನ್ನ ಸ್ವತಃ ಸಚಿವ ರಾಜಣ್ಣ ಒಪ್ಪಿಕೊಂಡಿದ್ದಾರೆ. ಎಲ್ಲೆಲ್ಲಿ ಮತ ಸೇರಿಸಿದ್ದಾರೆ ಆ ಕ್ಷೇತ್ರಗಳಿಗೆ ಮರು ಚುನಾವಣೆ ಮಾಡಿ ಎಂದು ನ್ಯಾಯಾಲಯದಲ್ಲಿ ಕೇಳುತ್ತೇವೆ. ಸಹಕಾರ ಸಚಿವ ರಾಜಣ್ಣಗೆ ಯಾವ ನೈತಿಕತೆಯೂ ಉಳಿದಿಲ್ಲ. ನಾನು ಅವರ ರಾಜೀನಾಮೆ ಕೇಳುವುದಿಲ್ಲ, ಅದನ್ನು ಅವರ ಆತ್ಮಸಾಕ್ಷಿಗೆ ಬಿಡುತ್ತೇನೆ. ರಾಜಣ್ಣ ಹೇಳಿಕೆಯನ್ನು ಕೋರ್ಟ್‌ಗೆ ಸಲ್ಲಿಸುತ್ತೇವೆ. ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ರಾಜ್ಯ ಸರ್ಕಾರ ಸ್ಪಷ್ಟವಾಗಿ ಅಕ್ರಮ ನಡೆಸಿದೆ. ಸಹಕಾರ ಕ್ಷೇತ್ರವನ್ನೇ ಹಾಳು ಮಾಡಲು ರಾಜಣ್ಣ ಹೆಜ್ಜೆ ಇಟ್ಟಿದ್ದಾರೆ. ಚುನಾವಣಾ ಅಕ್ರಮವನ್ನು ಹೇಗೆ ಮಾಡಬಹುದು ಎಂಬುದನ್ನು ರಾಜಣ್ಣ ಹೇಳಿ ಕೊಟ್ಟಿದ್ದಾರೆ. ಈ ಬಗ್ಗೆ ನಾನು ಸದನದಲ್ಲೂ ಚರ್ಚೆ ಮಾಡುತ್ತೇನೆ. ಮತಗಳನ್ನು ಸರ್ಕಾರ ಸೇರಿಸದಿದ್ದರೆ ಇಬ್ಬರು ಶಾಸಕರು ಹಾಗೂ ಮಾಜಿ ಶಾಸಕ ಸೋತು ಹೋಗುತ್ತಿದ್ದರು. ಅವರೆಲ್ಲಾ ಗೆದ್ದಿರುವುದು ಒಂದೊಂದು ಮತಗಳಿಂದ. ಇದು ಅಕ್ರಮವಾಗಿ ಬಂದಿರುವ ಮತಗಳು ಎಂದು ಆರೋಪಿಸಿದರು.
ಇನ್ನು ಎಂಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಪ್ರಭಾವ ಬೀರಿರುವುದು ಸಚಿವ ರಾಜಣ್ಣ ಹೇಳಿಕೆಯಿಂದ ಸಾಬೀತಾಗಿದೆ. ಎಂಸಿಡಿಸಿಸಿ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಭಾವ ಬೀರುವ ಬಗ್ಗೆ ನಾವ್ಯಾರು ಇದುವರೆಗೂ ಹೇಳಿರಲಿಲ್ಲ. ಸಿಎಂ ಸಿದ್ದರಾಮಯ್ಯ ಮೇಲೆ ನನಗೆ ಅಪಾರ ಗೌರವವಿದೆ. ಆದರೆ ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗಾಗಿ ಸಿಎಂ ಸಿದ್ದರಾಮಯ್ಯ ರಣತಂತ್ರ ರೂಪಿಸಿರುವುದನ್ನು ಸಚಿವ ರಾಜಣ್ಣ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಯಾವ ಉದ್ದೇಶದಿಂದ ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಸಹಕಾರ ಕ್ಷೇತ್ರಕ್ಕೆ ಅನಗತ್ಯವಾಗಿ ರಾಜಕೀಯ ಹಸ್ತಕ್ಷೇಪ ಮಾಡುವುದು ಅಪಾಯಕಾರಿ ಬೆಳವಣಿಗೆ. ಸಿಎಂ ಸಿದ್ದರಾಮಯ್ಯ ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಟಿ ನರಸೀಪುರ ಹಾಗು ನಂಜನಗೂಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೀನಾಯವಾಗಿ ಸೋಲು ಕಂಡಿದ್ದಾರೆ. ಇದು ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಗಿರುವ ಬಹುದೊಡ್ಡ ರಾಜಕೀಯ ಹಿನ್ನಡೆಯಾಗಿದೆ. ಇನ್ನು ಮುಂದಾದರೂ ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕ ಆಡಳಿತ ನಡೆಸಲು ಸರ್ಕಾರ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.





