ಮೈಸೂರು: ನಾಡಿನಾದ್ಯಂತ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದ್ದು, ದೇವಾಲಯಗಳತ್ತ ಸಾರ್ವಜನಿಕರ ದಂಡೇ ಹರಿದು ಬರುತ್ತಿದೆ.
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಅರಮನೆ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿ ದೇವಸ್ಥಾನ, ರಾಮನುಜ ರಸ್ತೆಯಲ್ಲಿರುವ ಕಾಮಕಾಮೇಶ್ವರಿ ದೇವಸ್ಥಾನ, ಮಾತೃಮಂಡಳಿ ವೃತ್ತದಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನ, ಲಿಂಗಾಂಬುದಿಪಾಳ್ಯದಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನ, ಕನ್ನೇಗೌಡನಕೊಪ್ಪಲು ಚಂದ್ರಮೌಳೇಶ್ವರಸ್ವಾಮಿ ದೇವಸ್ಥಾನ, ಚಾಮುಂಡಿಪುರಂನ ರಾಮಲಿಂಗೇಶ್ವರ ದೇವಸ್ಥಾನ, ಹಳೆ ಸಂತೇಪೇಟೆಯಲ್ಲಿರುವ ಶ್ರೀ ಪ್ರಸನ್ನ ನಂಜುಂಡೇಶ್ವರಸ್ವಾಮಿ ದೇವಸ್ಥಾನ, ಧನ್ವಂತ್ರಿ ರಸ್ತೆಯಲ್ಲಿರುವ ದೇವಸ್ಥಾನ, ಸುಣ್ಣದಕೇರಿಯಲ್ಲಿರುವ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಇನ್ನಿತರ ದೇವಸ್ಥಾನಗಳಿಗೆ ಸಾರ್ವಜನಕರ ದಂಡೇ ಹರಿದು ಬರುತ್ತಿದೆ.
ಮುಂಜಾನೆಯಿಂದಲೂ ದೇವಾಲಯಗಳಿಗೆ ಜನರ ದಂಡೇ ಹರಿದು ಬರುತ್ತಿದ್ದು, ಕಾಲಿಡಲು ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ದೇಗುಲಗಳಿಗೆ ಆಗಮಿಸುತ್ತಿರುವ ಜನತೆ ಬಿಲ್ವಪತ್ರೆ ಸೇರಿದಂತೆ ಶಿವನಿಗೆ ಪ್ರಿಯವಾದ ಹೂವುಗಳನ್ನು ಅರ್ಪಿಸಿ ದರ್ಶನ ಪಡೆಯುತ್ತಿದ್ದಾರೆ.
ಮಹಾಶಿವರಾತ್ರಿ ಪ್ರಯುಕ್ತ ಕೆಲ ದೇವಾಲಯಗಳಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದ್ದು, ಜನರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ತೆರಳುತ್ತಿದ್ದಾರೆ.