ಮೈಸೂರು: ನಾಡಿನೆಲ್ಲೆಡೆ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ.
ಜಯಚಾಮರಾಜಒಡೆಯರ್ ಅವರಯ ಹರಕೆ ರೂಪದಲ್ಲಿ ದೇವಾಲಯಕ್ಕೆ ಕೊಟ್ಟಿರುವ 11 ಕೆಜಿ ತೂಕದ ಚಿನ್ನದ ಕೊಳಗವನ್ನು ಮಹಾಶಿವರಾತ್ರಿ ಪ್ರಯುಕ್ತ ದೇವರಿಗೆ ಧರಿಸಲಾಗಿದೆ.
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬರುತ್ತಿದ್ದು, ದೇವಾಲಯದಲ್ಲಿ ಕಾಲಿಡಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಶಿವನಿಗೆ ಬೆಳಗಿನ ಜಾವದಿಂದ ವಿವಿಧ ಅಭಿಷೇಕ ಪೂಜಾ ಕೈಂಕರ್ಯ ನೆರವೇರಿಸಲಾಗಿದ್ದು, ಹಬ್ಬದ ಪ್ರಯುಕ್ತ ವಿವಿಧ ಹೂವುಗಳಿಂದ ದೇವಾಲಯವನ್ನು ಅಲಂಕರಿಸಲಾಗಿದೆ.
ವರ್ಷಕೊಮ್ಮೆ ಚಿನ್ನದ ಮುಖವಾಡಲ್ಲಿ ದರ್ಶನ ಕೊಡುವ ಶಿವನನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರೇ ಹರಿದು ಬರುತ್ತಿದ್ದಾರೆ.





