ಮೈಸೂರು: ನಗರದ ಕೆಆರ್‌ಎಸ್ ರಸ್ತೆಗೆ ಪ್ರಿನ್ಸೆಸ್ ರಸ್ತೆಯೆಂದು ನಾಮಕರಣ ಮಾಡಿರುವುದಕ್ಕೆ ಸಂಸದ ಯದುವೀರ್ ದಾಖಲೆಗಳಿದ್ದರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು(ಜನವರಿ.1) ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಮಾರ್ಗ ಎಂಬ ಹೆಸರಿಡುವುದಕ್ಕೆ ಬಿಜೆಪಿಯವರು ವಿರೋಧ ವ್ಯಕ್ಯಪಡಿಸುವ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರ ಹೆಸರು ಕೇಳಿದರೆ ಕೆಲವರು ಮೈಮೇಲೆ ಮಲ ಸುರಿದುಕೊಂಡಂವರಂತೆ ಆಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ವಾಸ್ತವ ತಿಳಿದುಕೊಳ್ಳಲೆಂದು ಮಂಗಳವಾರ(ಡಿ.31) ತಮ್ಮ ನೇತೃತ್ವದ ಕಾಂಗ್ರೆಸ್ ನಿಯೋಗವು ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಮಾಹಿತಿ ಪಡೆಯಲಾಗಿತ್ತು. ಆ ವೇಳೆ ನಗರ ಪಾಲಿಕೆ ಆಯುಕ್ತರು ಆ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂಬ ಹೆಸರಿಟ್ಟಿರುವ ಬಗ್ಗೆ ನಾವು ಪರಿಶೀಲನೆ ನಡೆಸಿರುವ ದಾಖಲೆಗಳಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಕಾನೂನಾತ್ಮಕವಾಗಿ ನಾಮಕರಣ ಪ್ರಕ್ರಿಯೆ ನಡೆಸಬೇಕು ಎಂದು ನಾವು ಮನವಿ ಮಾಡಿದ್ದು, ಆ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂಬ ಹೆಸರಿಡುವ ವಿಚಾರದಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಸಂಸದ ಯದುವೀರ್ ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ವಿಚಾರಕ್ಕೆ ಆಕ್ಷೇಪ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು,ಆ ರಸ್ತೆಗೆ ಪ್ರಿನ್ಸೆಸ್ ರಸ್ತೆಯೆಂದು ನಾಮಕರಣ ಮಾಡಿರುವುದಕ್ಕೆ ದಾಖಲೆಗಳಿದ್ದರೆ ನೀಡಲಿ. ಆ ರಸ್ತೆಯೂ ನಗರದಿಂದ ಕೆಆರ್‌ಎಸ್‌ಗೆ ಸಂಪರ್ಕಿಸುವ ರಸ್ತೆಯಾಗಿರುವುದರಿಂದ ಅದನ್ನು ಸಾರ್ವಜನಿಕರು ಕೆಆರ್‌ಎಸ್ ರಸ್ತೆ ಎಂದು ಕರೆಯುತ್ತಾರೆ ಎಂದು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಮೈಸೂರಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಈ ಕಾರಣಕ್ಕೆ ಅವರ ಕೊಡುಗೆಯನ್ನು ಪರಿಗಣಿಸಿ ಆ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡುವಂತೆ ಸಾರ್ವಜನಿಕರ ಒತ್ತಾಯವಿತ್ತು. ಹಾಗಾಗಿ ನಗರ ಪಾಲಿಕೆಯೂ ಕ್ರಮ ಕೈಗೊಂಡಿದೆ ಎಂದಿದ್ದಾರೆ.
ನಾವು ಮಹಾರಾಜರ ವಿರುದ್ಧ ಇದ್ದೇವೆ ಎಂದು ಬಿಂಬಿಸುವುದು ತಪ್ಪು. ಅಸಲಿ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ನಮ್ಮ ಪಕ್ಷದಿಂದ ಚುನಾವಣೆಯಲ್ಲಿ ಟಿಕೆಟ್ ನೀಡಿ ಗೆಲ್ಲಿಸಿದ್ದೇವು. ಯದುವೀರ್ ಅವರನ್ನು ರಾಜ ಮನೆತನದಿಂದ ದತ್ತು ಪಡೆಯಲಾಗಿದೆ. ಅವರು ವರ್ಜಿನಲ್ ರಾಜವಂಶಸ್ಥರಲ್ಲ. ಹೀಗಾಗಿ ಅವರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಆದ್ಯತೆ ನೀಡಲಿ ಎಂದು ಹೇಳಿದ್ದಾರೆ.