ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ತನಿಖೆಗೆ ರಾಜ್ಯಪಾಲರು ನೀಡಿದ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದೂರುದಾರ ವಕೀಲ ಪ್ರದೀಪ್ ಕುಮಾರ್ ಪಟ್ಟು ಹಿಡಿದಿದ್ದು, ಮೈಸೂರಿನ ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶಗೆ ದೂರು ನೀಡಿದ್ದಾರೆ. ಈ ವೇಳೆ ದೂರಿಗೆ ಸ್ವೀಕೃತ ಪತ್ರ ಕೊಟ್ಟಿರುವ ಲೋಕಾಯುಕ್ತ ಎಸ್ಪಿ ವಿರುದ್ಧ ಪ್ರದೀಪ್ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಎಸ್ಪಿ ಜೊತೆಗೆ ಕೂಗಾಟ ನಡೆಸಿದ ಪ್ರದೀಪ್ ಕುಮಾರ್ ಅವರು, ನಾನು ಮೂರು ಭಾರಿ ದೂರು ಕೊಟ್ಟಿದ್ದೇನೆ. ಯಾವುದಕ್ಕೂ ಹಿಂಬರಹ ಕೊಟ್ಟಿಲ್ಲ, ಕೇವಲ ಸ್ವೀಕೃತ ಅಷ್ಟೇ ಕೊಡುತ್ತಿದ್ದಾರೆ. ಈಗಲೂ ನಿಮಗೆ ಕಳುಹಿಸುತ್ತೇವೆ ಅಂತಿದ್ದಾರೆ. ನನಗೆ ಹಿಂಬರಹ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದೇನೆ. ಅರ್ಧ ಗಂಟೆಗಳ ಕಾಲ ಕಾಲಾವಕಾಶ ಕೇಳಿದ್ದೇನೆ. ಹಿಂಬರಹ ಕೊಡುವವರೆಗೆ ನಾನು ಲೋಕಾಯುಕ್ತ ಕಚೇರಿ ಬಿಟ್ಟು ಹೋಗಲ್ಲ. ನಾನು ಈ ಸ್ಥಳದಲ್ಲೇ ಧರಣಿ ಮಾಡುತ್ತೇನೆ. ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. 17ಎ ಅಡಿಯಲ್ಲಿ ತನಿಖಾಧಿಕಾರಿ ಸ್ವತಂತ್ರವಾಗಿ ತನಿಖೆ ಮಾಡಬಹುದು ಎಂದಿದ್ದಾರೆ. ಈ ಅಂಶದ ಆಧಾರದ ಮೇಲೆ ನನ್ನ ದೂರಿನ ಅನ್ವಯ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಬಹುದು. ಸಿದ್ದರಾಮಯ್ಯ, ಯತೀಂದ್ರ ಸಿದ್ದರಾಮಯ್ಯ, ಪಾರ್ವತಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಇತರ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲು ಮಾಡಬೇಕು. ಲೋಕಾಯುಕ್ತ ಅಧಿಕಾರಿಗಳ ನಡೆಯನ್ನ ಗಮನಿಸಿದರೆ ಸಿಎಂ ಅವರ ಒತ್ತಡಕ್ಕೆ ಒಳಗಾದಂತೆ ಕಾಣುತ್ತಿದೆ. ನಾನು ಈ ಬಗ್ಗೆ ಹೈಕೋರ್ಟ್ನಲ್ಲಿ ರಿಟ್ ಸಲ್ಲಿಸುವ ಚಿಂತನೆಯಲ್ಲಿದ್ದೇನೆ ಎಂದು ಕಿಡಿಕಾರಿದರು.