ಮೈಸೂರು: ಕ್ಯಾತಮಾರನಹಳ್ಳಿ ಮಸೀದಿ ಬಂದ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ಸೂಚನೆ ಮೇರೆಗೆ ಇಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಮುತ್ತುರಾಜ್ ಸಹ ಭಾಗಿಯಾಗಿದ್ದರು. ಸಭೆಗೆ ಬಂದಿದ್ದ ಎರಡೂ ಕೋಮಿನ ಜನತೆಯ ಬಳಿ ಅಭಿಪ್ರಾಯ ಸಂಗ್ರಹಿಸಲಾಯಿತು.
ಇನ್ನು ಇಂದಿನ ಸಭೆಗೆ ಮಸೀದಿ ಪುನರಾರಂಭ ಸಂಬಂಧ ಕೋರ್ಟ್ ಮೇಟ್ಟಿಲೇರಿದ್ದ ದೂರುದಾರ ಮುನಾವರ್ ಪಾಶಾ ಹಾಜರಾಗಿರಲಿಲ್ಲ.
ಸಭೆಯಲ್ಲಿ ಒಂದು ಕೋಮಿನ ಜನಾಂಗ ಮಸೀದಿಯನ್ನು ಮತ್ತೆ ತೆರೆಯಬೇಕು ಎಂದರೆ, ಮತ್ತೊಂದು ಕೋಮಿನ ಜನಾಂಗ ಮಸೀದಿಯನ್ನು ಯಾವುದೇ ಕಾರಣಕ್ಕೂ ಮತ್ತೆ ಓಪನ್ ಮಾಡಬಾರದು ಎಂದು ಆಗ್ರಹಿಸಿದೆ.
ಎರಡು ಕೋಮಿನ ಜನತೆಯ ಬಳಿ ಇಂದು ಅಭಿಪ್ರಾಯ ಸಂಗ್ರಹಿಸಿದ್ದು, ಇದು ಯಾವ ಹಂತಕ್ಕೆ ಬಂದು ತಲುಪುತ್ತದೆ ಎಂಬುದನ್ನು ಕಾದುನೋಡಬೇಕಿದೆ.