ಮೈಸೂರು: ಮೈಸೂರು ಭಾಗದಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಟಿ.ಎಸ್.ಶ್ರೀವತ್ಸ ಪ್ರತಿಕ್ರಿಯೆ ನೀಡಿದ್ದು, ಅರಣ್ಯ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳು ಹಾಗೂ ಒತ್ತುವರಿಗಳನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕ್ರಮ ಒತ್ತುವರಿ ಸಂಬಂಧ ಜನರ ಆಕ್ರೋಶಕ್ಕೂ ಮೊದಲು ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಈ ಮೂಲಕ ಮಾನವ ಪ್ರಾಣಿ ಸಂಘರ್ಷವನ್ನು ತಡೆಯಬೇಕು. ಅರಣ್ಯ ವ್ಯಾಪ್ತಿಯಲ್ಲಿ ಇರುವ ರೆಸಾರ್ಟ್‌ಗಳಲ್ಲಿ ರಾತ್ರಿ ವೇಳೆ ಫೈರ್ ಕ್ಯಾಂಪ್ ಹಾಕುತ್ತಾರೆ. ಇದರಿಂದ ಪ್ರಾಣಿಗಳಿಗೆ ತುಂಬಾ ತೊಂದರೆ ಆಗುತ್ತಿದೆ. ಭಯದಿಂದಲೇ ಕಾಡುಪ್ರಾಣಿಗಳು ನಾಡಿನತ್ತ ಆಗಮಿಸುತ್ತಿವೆ. ಇದಕ್ಕೆ ಅರಣ್ಯ ಇಲಾಖೆ ಕಡಿವಾಣ ಹಾಕಲಿ ಎಂದು ಆಗ್ರಹಿಸಿದರು.
ಇನ್ನು ಎಲೆಕ್ಷನ್ ಕಮಿಷನರ್ ರಾಜಕೀಯ ಪುಡಾರಿ ರೀತಿ ವರ್ತನೆ ಮಾಡುತ್ತಿದ್ದಾರೆ ಎಂಬ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಯಾವ ಯಾವ ಸಮಯದಲ್ಲಿ ಸಂವಿಧಾನ ದುರುಪಯೋಗ ಆಯ್ತು ಎಂಬುದನ್ನು ನೀವೇ ಅರಿತುಕೊಳ್ಳಿ. ನೀವು ಚುನಾವಣೆಯಲ್ಲಿ ಗೆದ್ದರೆ ಮತಗಳ್ಳತನ ಇಲ್ಲ. ಸೋತರೆ ಮಾತ್ರ ಮತಗಳ್ಳತನ ಅನ್ನೋದಾ? ಈ ಬಗ್ಗೆ ನೀವೇ ಪರಾಮರ್ಶೆ ಮಾಡಬೇಕು ಎಂದು ಯತೀಂದ್ರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ: ಮೈಸೂರು ಜಿಲ್ಲೆಯಲ್ಲಿ ಮುಂದುವರಿದ ಹುಲಿ ದಾಳಿ
ಇನ್ನು ಆರ್‌ಎಸ್‌ಎಸ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪದೇ ಪದೇ ಹೇಳಿಕೆ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಬಗ್ಗೆ ಯಾಕಿಷ್ಟು ಕೋಪ ನಿಮಗೆ. ಆರ್‌ಎಸ್‌ಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಪದೇ ಪದೇ ಹೇಳಿಕೆ ಕೊಡ್ತಿದ್ದಾರೆ. ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಕ್ಕೆ ಸರ್ಕಾರ ಮುಂದಾಗಿದೆ. ಇಷ್ಟಾದರೂ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಒಂದೇ ಒಂದು ಮಾತು ಆಡಿಲ್ಲ. ತಮ್ಮ ಮಗ ಎಂಬ ಕಾರಣಕ್ಕೆ ಹೇಳಿಕೆ ಕೊಡುತ್ತಿಲ್ಲವೇ? ಆರ್‌ಎಸ್‌ಎಸ್ ಚಟುವಟಿಕೆ ಬಗ್ಗೆ ನಿಮಗೆ ಗೊತ್ತಿಲ್ವ? ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ. ಆದರೆ ಇದರ ಬಗ್ಗೆ ಅವರಾದರು ಒಂದು ಹೇಳಿಕೆ ಕೊಡಬೇಕಲ್ವಾ? ಎಂದು ಪ್ರಶ್ನೆ ಮಾಡಿದರು.
ಇನ್ನು ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ವಿಚಾರ ತೀವ್ರ ಚರ್ಚೆಯಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈಗಿನ ಪರಿಸ್ಥಿತಿ ನೋಡಿದ್ರೆ ಖಂಡಿತ ಕ್ರಾಂತಿ ಆಗುತ್ತದೆ. ಅಂತಹ ಬೆಳವಣಿಗೆಗಳು ಕಾಣುತ್ತಿವೆ. ನಮ್ಮ ಜಿಲ್ಲೆಯ ಸಿಎಂ ಬದಲಾವಣೆ ಆಗುವ ತರ ಕಾಣುತ್ತಿದೆ. ನವೆಂಬರ್ ಕ್ರಾಂತಿಯಂತೂ ಆಗೇ ಆಗುತ್ತದೆ ಎಂದು ಭವಿಷ್ಯ ನುಡಿದರು.





