ಮೈಸೂರು: ರಾಜ್ಯದಿಂದ ದಿನದಿಂದ ದಿನಕ್ಕೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಜಯದೇವ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡುಬಂದಿದೆ.
ಆಸ್ಪತ್ರೆಗೆ ಬೆಳ್ಳಂಬೆಳಿಗ್ಗೆಯೇ ಆಗಮಿಸುತ್ತಿರುವ ಜನರು ಕೌಂಟರ್ ಹಾಗೂ ಇನ್ನಿತರೆ ಕೊಠಡಿಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಸಾಮಾನ್ಯ ಜ್ವರ, ಸುಸ್ತು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವರು ಕೂಡ ಸ್ಥಳೀಯ ಆಸ್ಪತ್ರೆಗೆ ಹೋಗುವ ಬದಲು ನೇರವಾಗಿ ಜಯದೇವ ಆಸ್ಪತ್ರೆಗೆ ಬರುತ್ತಿದ್ದಾರೆ.
ಹೃದಯಾಘಾತಕ್ಕಿಂತ ಹೆಚ್ಚಾಗಿ ಅದರ ಭಯದಲ್ಲೇ ಹೆಚ್ಚಿನ ಜನರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿರುವವರಿಗೆ ತೀವ್ರ ಸಮಸ್ಯೆ ಉಂಟಾಗಿದೆ.
ಪ್ರತಿನಿತ್ಯ ಮೈಸೂರು ಜಿಲ್ಲೆ ಸೇರಿದಂತೆ ಹೊರಗಡೆ ಜಿಲ್ಲೆಗಳಿಂದ 400 ರಿಂದ 500 ಜನ ಜಯದೇವ ಆಸ್ಪತ್ರೆಗೆ ಆಗಮಿಸುತ್ತಿದ್ದು, ಆಸ್ಪತ್ರೆ ಸಿಬ್ಬಂದಿ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.





