ಮೈಸೂರು: ಮೈಕ್ರೋ ಫೈನಾನ್ಸ್ ಕಂಪನಿಯವರು ಸಾಲಗಾರರಿಗೆ ನೀಡುತ್ತಿರುವ ಹಿಂಸೆ ಹಾಗೂ ದೌರ್ಜನ್ಯ ನಿಲ್ಲಬೇಕೆಂದು ಒತ್ತಾಯಿಸಿ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಒನಕೆ ಹಿಡಿದು ವಿನೂತನವಾಗಿ ಪ್ರತಿಭಟಿಸಿದರು.
ನಗರದ ಹಾರ್ಡಿಂಗ್ ವೃತ್ತದ ಬಳಿ ಭಾನುವಾರ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನೆರೆ ರಾಜ್ಯಗಳ ಕಪ್ಪು ಹಣ ತಂದು ರಾಜ್ಯದ ಜನರಿಗೆ ಹಿಂಸೆ ಕೊಡುವ ಫೈನಾನ್ಸ್ ಕಂಪನಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ತಲೆ ಎತ್ತಿರುವ ಅಕ್ರಮ ಫೈನಾನ್ಸ್ ಕಂಪನಿಗಳನ್ನು ರದ್ದು ಮಾಡಬೇಕು. ಫೈನಾನ್ಸ್ ಕಂಪನಿಗಳ ವಿರುದ್ಧ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿ ತನಿಖೆ ನಡೆಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್‌ಗೂ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಾರಿ ನಿರ್ದೇಶನಾಲಯದವರೇ, ನಿಮಗೆ ತಾಕತ್ತಿದ್ದರೆ ಮೈಕ್ರೋ ಫೈನಾನ್ಸ್‌ಗಳ ಮೇಲೆ ದಾಳಿ ಮಾಡಿ. ಮೈಕ್ರೋ ಫೈನಾನ್ಸ್ ಸಾಲ ದೌರ್ಜನ್ಯ ನಿಲ್ಲಿಸಿ ಎಂದು ಒತ್ತಾಯಿಸಿದರು.
ಕೇಂದ್ರ ಬಜೆಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ರಾಜ್ಯಕ್ಕೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿದೆ. ನಮ್ಮ ಸಂಸದರಿಗೆ ಮಾನ ಮರ್ಯಾದೆ ಇಲ್ಲ. ಎಚ್.ಡಿ.ಕುವಾರಸ್ವಾಮಿ ಊರಲ್ಲಿರುವುದೆಲ್ಲ ಮಾತಾಡ್ತಾರೆ, ಇದರ ಬಗ್ಗೆ ಏಕೆ ಮಾತನಾಡಿಲ್ಲ. ಜೋಶಿ ಬಹಳ ಮಡಿವಂತ. ಆದರೆ ಬಜೆಟ್ ಬಗ್ಗೆ ಮಾತನಾಡಿಲ್ಲ ಯಾಕೆ? ಶೋಭಾ ಕರಂದ್ಲಾಜೆ ತುಟಿ ಬಿಚ್ಚಿಲ್ಲ ಯಾಕೆ? ಎಂದು ವಾಗ್ದಾಳಿ ನಡೆಸಿದರು.
ರಾಜೀನಾಮೆ ಕೊಡಬಾರದು:
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಇರೋದರಲ್ಲಿ ಒಬ್ಬ ಒಳ್ಳೆಯ ವ್ಯಕ್ತಿ. ಇವರೇ ಕೊನೆ ಕೊಂಡಿ, ಈ ಕೊಂಡಿ ಕಳಚಿದರೆ ರಾಜ್ಯ ದಿಕ್ಕೆಟ್ಟು ಹೋಗುತ್ತದೆ. ಸಿದ್ದರಾಮಯರನ್ನು ಸಿಎಂ ಸ್ಥಾನದಿಂದ ಇಳಿಸಲು ಜಾ.ದಳ, ಬಿಜೆಪಿ ಮತ್ತು ಕಾಂಗ್ರೆಸ್‌ನ ಕೆಲವರು ಪಿತೂರಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು ಎಂದು ಒತ್ತಾಯಿಸಿದರು.
ರಾಜ್ಯಪಾಲರು ಪ್ರಾಸಿಕೂಷನ್ ಕೊಡಬಾರದಿತ್ತು, ರಾಜ್ಯಪಾಲರಿಗೆ ಇರುವ ಈ ಕೆಟ್ಟ ಅಧಿಕಾರ ತೆಗೆಯಬೇಕು. ಇದಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯಬೇಕು. ಸಿದ್ದರಾಮಯ್ಯ ನೂರಾರು ನಾಗರಹಾವುಗಳ ನಡುವೆ ಮಲಗಿದ್ದಾರೆ, ಜೋಪಾನವಾಗಿ ಇರಬೇಕು. ಸಿದ್ದರಾಮಯ್ಯ ಅರೆಸ್ಟ್ ಆದರೂ ರಾಜೀನಾಮೆ ಕೊಡಬೇಡಿ, ಜೈಲಿನಲ್ಲೇ ಇದ್ದು ಆಡಳಿತ ಮಾಡಿ ಎಂದರು.