ಮೈಸೂರು: ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯದ ಸೂಪರ್ ಸಿಎಂ ಎಂಬ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿರುವ ವಿಚಾರಕ್ಕೆ ಸಚಿವ ಎಚ್.ಸಿ.ಮಹದೇವಪ್ಪ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವ ಸೂಪರ್ ಸಿಎಂಗಳು ಇಲ್ಲ. ರಾಜ್ಯದಲ್ಲಿ ಇರುವುದು ಒಬ್ಬರೇ, ಸಿಎಂ ಅದು ಸಿದ್ದರಾಮಯ್ಯ. ನಮ್ಮಲ್ಲಿ ಅಸಂವಿಧಾನಿಕವಾದ ಯಾವ ಹುದ್ದೆಗಳು ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಟ್ವೀಟ್‌ಗೆ ಕಿಡಿಕಾರಿದರು.
ಇನ್ನು ಸಚಿವರನ್ನ ಪ್ರತ್ಯೇಕವಾಗಿ ಕರೆದು ರಣದೀಪ್ ಸಿಂಗ್ ಸುರ್ಜೇವಾಲಾ ಸಭೆ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸುರ್ಜೇವಾಲಾ ನಮ್ಮ ರಾಜ್ಯದ ಉಸ್ತುವಾರಿ. ಸಭೆ ಕರೆಯಲು ಅವರಿಗೆ ಎಲ್ಲಾ ರೀತಿಯ ಹಕ್ಕಿದೆ. ಹೀಗಾಗಿ ಸಭೆ ನಡೆಸುತ್ತಿದ್ದಾರೆ. ಇದರಲ್ಲಿ ಯಾವ ತಪ್ಪು ಇಲ್ಲ. ಯಾವ ಸಚಿವರು ಸಹ ಈ ಸಭೆಗೆ ವಿರೋಧ ವ್ಯಕ್ತಪಡಿಸಿಲ್ಲ. ನನ್ನನ್ನು ಸಭೆಗೆ ಕರೆದಿದ್ದರು. ನಾನು ಇಂಡಿ ಕಾರ್ಯಕ್ರಮ ಮುಗಿಸಿ ಆ ನಂತರ ಭೇಟಿಯಾಗಿ ಮಾತನಾಡಿದೆ. ಇದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ ಎಂದು ಸ್ಪಷ್ಟನೆ ನೀಡಿದರು.





